ಟ್ರಾಫಿಕ್​ ಜಾಮ್​: ವಿಶ್ವದಲ್ಲೇ ಸಿಲಿಕಾನ್​ ಸಿಟಿ ಬೆಂಗಳೂರಿಗೆ 2ನೇ ಸ್ಥಾನ! ಲಂಡನ್​ ಮೊದಲು​

BNG Traffic
Published on

ನವದೆಹಲಿ: ಶ್ರೀಮಂತ ಇತಿಹಾಸ ಹಾಗೂ ಅಭಿವೃದ್ಧಿ ಹೊಂದುತ್ತಿರುವ ಐಟಿ ಉದ್ಯಮಗಳ ಕಾರಣದಿಂದ ಬೆಂಗಳೂರನ್ನು ಭಾರತದ ಸಿಲಿಕಾನ್​ ವ್ಯಾಲಿ ಎಂದು ಕರೆಯುತ್ತಾರೆ. ಆದರೆ, ದುರಾದೃಷ್ಟವಶಾತ್ ಇದೇ ಬೆಂಗಳೂರು​ ಟ್ರಾಫಿಕ್​ ಜಾಮ್​ ಕುಖ್ಯಾತಿಯನ್ನು ಹೊಂದಿದೆ. ಸಾವಿಲ್ಲದ ಮನೆಯಿಲ್ಲ, ಬೆಂಗಳೂರಿನಲ್ಲಿ ಟ್ರಾಫಿಕ್​ ಜಾಮ್​ ಅನುಭವಿಸದ ವ್ಯಕ್ತಿಯಿಲ್ಲ ಎಂಬ ಪರಿಸ್ಥಿತಿ ನಮ್ಮ ಬೆಂದಕಾಳೂರದ್ದು. ಬಹುತೇಕ ಎಲ್ಲರು ಟ್ರಾಫಿಕ್​ ಕಿರಿಕಿರಿಯನ್ನು ಅನುಭವಿಸಿದ್ದಾರೆ.

ಇತ್ತೀಚೆಗೆ ಜಿಯೋಲೊಕೇಶನ್ ತಂತ್ರಜ್ಞಾನ ಸಂಸ್ಥೆ ಟಾಮ್​ ಟಾಮ್, ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಅತ್ಯಂತ ನಿಧಾನಗತಿಯ ನಗರಗಳಲ್ಲಿ ಬೆಂಗಳೂರು ಕೂಡ ಒಂದೆನಿಸಿಕೊಂಡಿದೆ. ಟ್ರಾಫಿಕ್​ ಸಮಯದಲ್ಲಿ ಕೇವಲ 10 ಕಿ.ಮೀ ಪ್ರಯಾಣಿಸಲು ಸರಾಸರಿ ಅರ್ಧ ಗಂಟೆಗೂ ಅಧಿಕ ಸಮಯ ತೆಗೆದುಕೊಳ್ಳುತ್ತದೆ ಎಂದು ಸಮೀಕ್ಷೆ ತಿಳಿಸಿದೆ. ಈ ಪಟ್ಟಿಯಲ್ಲಿ ಲಂಡನ್​ ಮೊದಲ ಸ್ಥಾನದಲ್ಲಿದೆ.

ಚಾಲನಾ ವೆಚ್ಚ, ಟ್ರಾಫಿಕ್‌ನಲ್ಲಿ ಕಳೆಯುವ ಸಮಯ ಮತ್ತು ಸುದೀರ್ಘ ಟ್ರಾಫಿಕ್ ಜಾಮ್‌ಗಳಿಂದ ಇಂಗಾಲದ ಹೊರಸೂಸುವಿಕೆ ಮುಂತಾದ ಅಂಶಗಳನ್ನು ಟಾಮ್​ಟಾಮ್​ ನಡೆಸಿದ ಅಧ್ಯಯನದಲ್ಲಿ ಪರಿಗಣಿಸಲಾಗಿದೆ.

ನಿಧಾನಗತಿಯ ನಗರಗಳ ಪಟ್ಟಿಯಲ್ಲಿ ಯುನೈಟೆಡ್​ ಕಿಂಗ್​ಡಮ್​ ಲಂಡನ್​ ಮೊದಲ ಸ್ಥಾನದಲ್ಲಿದ್ದರೆ, ಭಾರತ ಹಾಗೂ ಕರ್ನಾಟಕದ ರಾಜಧಾನಿ ಬೆಂಗಳೂರು ಎರಡನೇ ಸ್ಥಾನ ಕಾಯ್ದುಕೊಂಡಿದೆ. ಮೂರನೇ ಸ್ಥಾನದಲ್ಲಿ ಐರ್ಲೆಂಡ್​ನ ಡಬ್ಲಿನ್, ನಾಲ್ಕನೇ ಸ್ಥಾನದಲ್ಲಿ ಜಪಾನ್​ನ ಸಾಪೊರ್ರೋ ಹಾಗೂ ಐದನೇ ಸ್ಥಾನದಲ್ಲಿ ಇಟಲಿಯ ಮಿಲಾನ್​ ಇದೆ.

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಪ್ರತಿ ಮನುಷ್ಯ 2022ರಲ್ಲಿ 129 ಕ್ಕೂ ಹೆಚ್ಚು ಗಂಟೆಗಳ ಕಾಲ ಟ್ರಾಫಿಕ್​ನಲ್ಲಿ ಕಳೆದಿದ್ದಾನೆ. ಹೆಚ್ಚುವರಿಯಾಗಿ 2022ರಲ್ಲಿ ಅತಿ ಹೆಚ್ಚು ಇಂಗಾಲದ ಹೊರಸೂಸುವಿಕೆ ನಗರಗಳ ಸಾಲಿನಲ್ಲಿ ಬೆಂಗಳೂರು ಐದನೇ ಸ್ಥಾನದಲ್ಲಿದೆ. ವಿಪರೀತ ಟ್ರಾಫಿಕ್ ಸಮಯದಲ್ಲಿ ಪೆಟ್ರೋಲ್ ಕಾರುಗಳ ಮೂಲಕ 974 ಕೆಜಿ ಇಂಗಾಲವನ್ನು ಹೊರಸೂಸಿವೆ. ಆದಾಗ್ಯೂ, ಈ ಅಧ್ಯಯನವು ಡೀಸೆಲ್ ಕಾರುಗಳಿಂದ ಹೊರಸೂಸುವಿಕೆಯ ಡೇಟಾವನ್ನು ಒದಗಿಸಿಲ್ಲ.

ಡ್ಯಾಶ್ ಕಾರ್ ನ್ಯಾವಿಗೇಷನ್, ಸ್ಮಾರ್ಟ್‌ಫೋನ್‌ಗಳು, ವೈಯಕ್ತಿಕ ನ್ಯಾವಿಗೇಷನ್ ಸಾಧನಗಳು ಮತ್ತು ಟೆಲಿಮ್ಯಾಟಿಕ್ಸ್ ಸಿಸ್ಟಮ್‌ಗಳು ಸೇರಿದಂತೆ 600 ಮಿಲಿಯನ್‌ಗಿಂತಲೂ ಹೆಚ್ಚು ಸಾಧನಗಳನ್ನು ವಿಶ್ಲೇಷಿಸುವ ಮೂಲಕ ಟಾಮ್‌ಟಾಮ್ ಡೇಟಾವನ್ನು ಸಂಗ್ರಹಿಸಿದೆ. 2019ಕ್ಕೆ ಹೋಲಿಸಿದರೆ ಈ ಬಾರಿ ಟ್ರಾಫಿಕ್​ ಸಮಸ್ಯೆ ಕೊಂಚ ಇಳಿದಿದೆ. ಕಳೆದ ಬಾರಿ ಬೆಂಗಳೂರು ನಂ.1 ಸ್ಥಾನದಲ್ಲಿತ್ತು. ಇದೀಗ ಎರಡನೇ ಸ್ಥಾನಕ್ಕೆ ಕುಸಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net