ಸಾಂದರ್ಭಿಕ ಚಿತ್ರ 
ನ್ಯೂಸ್

ಆತನಿಗೆ 18, ಗೆಳತಿಗೆ 17: ಇಬ್ಬರು ನಡುವಿತ್ತು ಒಂದು ವರ್ಷದ ಪ್ರೀತಿ, ಆದರೆ ಕೊನೆಗೆ ನಡೆದಿದ್ದು ದುರಂತ..

ನಾಗ್ಪುರ: ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಪ್ರೇಮಿಗಳಿಬ್ಬರು ಪ್ರಾಣ ತ್ಯಾಗ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ಗೌರವ್ (18) ಮತ್ತು ತನ್ವಿ (17 ವರ್ಷ, ಹೆಸರು ಬದಲಾಯಿಸಲಾಗಿದೆ) ಮೃತ ದುರ್ದೈವಿಗಳಾಗಿದ್ದು, ಇಲ್ಲಿನ ಪಾರ್ಶಿವಾಣಿ ಪೊಲೀಸ್ ಠಾಣೆ ವ್ಯಾಪ್ತಿಯ ಪೆಂಧಾರಿ ಎಂಬಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗೌರವ್ ಈಗಷ್ಟೇ 12ನೇ ತರಗತಿ ಪಾಸಾಗಿದ್ದು, ತನ್ವಿ 12ನೇ ತರಗತಿಯಲ್ಲಿ ಓದುತ್ತಿದ್ದಳು.

ಗೌರವ್ ಮತ್ತು ತನ್ವಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಸೋಮವಾರ ರಾತ್ರಿ ಇಬ್ಬರೂ ತಡರಾತ್ರಿವರೆಗೂ ವ್ಯಾಟ್ಸ್​​ಆ್ಯಪ್​ನಲ್ಲಿ ಚಾಟ್ ಮಾಡಿದ್ದಾರೆ. ಇದೇ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಇಬ್ಬರೂ ಕೂಡಿಕೊಂಡು ಗೌರವ್​ನ ಮನೆ ಬಳಿಯಿರುವ ನಿರ್ಜನ ಮನೆಗೆ ಹೋಗಿ ಅಲ್ಲಿಯೇ ಹಗ್ಗ ಬಿಗಿದು ಇಬ್ಬರೂ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ: VIDEO| ಮಗನ ಮೃತದೇಹವನ್ನು ತಳ್ಳುಗಾಡಿಯಲ್ಲಿರಿಸಿ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಪರದಾಡಿದ ತಾಯಿ..

ಮಂಗಳವಾರ ಬೆಳಗ್ಗೆ ನಾಗರಿಕರೊಬ್ಬರು ಮನೆಯ ಬಾಗಿಲು ತೆರೆದಿರುವುದನ್ನು ಕಂಡು, ಒಳಗೆ ಹೋದಾಗ ಇಬ್ಬರು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈ ವೇಳೆ ಪರಶಿವಾಣಿ ಪೊಲೀಸರು ಹಠಾತ್ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರೀತಿಗೆ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)