ನ್ಯೂಸ್

ಪ್ರೀತಿಸಿ ಮದುವೆಯಾದವಳ ಮೇಲೇ ಸಂಶಯ; ನಡೆದೇ ಹೋಯ್ತು ದುರಂತ

ಶಿವಮೊಗ್ಗ: ಪ್ರೀತಿಸಿ ಮದುವೆಯಾದ ಪತ್ನಿಯ ಶೀಲ ಶಂಕಿಸಿ ಪತಿಯೇ ಆಕೆಯ ಪ್ರಾಣ ತೆಗೆದಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಆಯನೂರು ಮೂಲದ 21 ವರ್ಷ ವಯಸ್ಸಿನ ಫಿಜಾ ಕೌಸರ್ (21) ಪತಿಯಿಂದಲೇ ಕೊಲೆಗೀಡಾದ ಮಹಿಳೆ. ಸಂಶಯದ ಹಿನ್ನೆಲೆಯಲ್ಲಿ ಪತ್ನಿಯ ಕೊಲೆ ಮಾಡಿದವ ಶೋಯೆಬ್.

ಆಯನೂರಿನಿಂದ ಶಿವಮೊಗ್ಗಕ್ಕೆ‌ ಕಾಲೇಜಿಗೆ ಬರುತ್ತಿದ್ದ ಫಿಜಾ ಕೌಸರ್​​ನನ್ನು ಪ್ರೀತಿಸಿದ್ದ, ಶೋಯೆಬ್. ತನ್ನ ಮನೆಯವರ ವಿರೋಧದ ನಡುವೆಯೂ ಆಕೆ ಎರಡೂವರೆ ವರ್ಷದ ಹಿಂದೆ ಅವನನ್ನು ಮದುವೆಯಾಗಿದ್ದಳು. ಆದರೆ ಇತ್ತೀಚೆಗೆ ಪತ್ನಿಗೆ ಬೇರೊಬ್ಬರೊಂದಿಗೆ ಸಂಬಂಧ ಇದೆ ಎಂದು ಶೋಯೆಬ್​ ಅನುಮಾನಪಡುತ್ತಿದ್ದ ಎನ್ನಲಾಗಿದೆ.

ಗಂಡನೊಂದಿಗೆ ಜಗಳ ಮಾಡಿಕೊಂಡು ಕೌಸರ್ ಒಂದು ವಾರದ ಹಿಂದೆ ತವರು ಮನೆಗೆ ತೆರಳಿದ್ದಳು. ನಿನ್ನೆ ಕಂಪ್ಯೂಟರ್ ಕ್ಲಾಸ್​​ಗೆಂದು ಶಿವಮೊಗ್ಗಕ್ಕೆ ಬಂದಿದ್ದ‌ ಆಕೆಯನ್ನು ಆಟೋದಲ್ಲಿ ಕರೆದೊಯ್ದ ಶೋಯೆಬ್​ ಕೊಲೆ‌ಗೈದಿದ್ದಾನೆ. ಪತ್ನಿಯನ್ನು ಕೊಲೆ‌ ಮಾಡಿದ ಬಳಿಕ ಆಕೆಯ ಮೈಮೇಲಿದ್ದ ಒಡವೆಗಳನ್ನು ತೆಗೆದುಕೊಂಡು, ಸೀದಾ ತುಂಗಾ ನಗರ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಮೊಗ್ಗದ ಅನುಪಿನಕಟ್ಟೆ ಸಮೀಪದ ವಾಸುಸತ್ಯ ಬಡಾವಣೆಯಲ್ಲಿ ಈ ಘಟನೆ‌ ನಡೆದಿದ್ದು, ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.