

ಈ ವಿಷಯದಲ್ಲಿ ನಮ್ಮಲ್ಲಿ ಯಾವಾಲೂ ಜಗಳ ಆಗುತ್ತಿತ್ತು. ಬರಬರುತ್ತಾ ಅವಳು ನನ್ನ ಮೇಲೆ ಜೋರು ಮಾಡುತ್ತಿದ್ದಳು. ನೀನು ಸೋಮಾರಿ. ಕೆಲಸ ಮಾಡುವುದಿಲ್ಲ , ಸಂಪಾದನೆಯೂ ಇಲ್ಲ ಎಂದು ಹೀಯಾಳಿಸುತ್ತಿದ್ದಳು.
ನನಗೆ ಒಳ್ಳೆಯ ಕೆಲಸ ನಲವತ್ತು ವರ್ಷ ವಯಸ್ಸು ಆದರೂ ಇನ್ನೂ ಸಿಕ್ಕಿಲ್ಲ. ಈಗ ಅವಳ ಅಣ್ಣಂದಿರು ಅವಳ ತಲೆ ಕೆಡಿಸಿ ಅವಳನ್ನು ತಮ್ಮ ಊರಿಗೇ ಕರೆದುಕೊಂಡು ಹೋಗಿದ್ದಾರೆ. ನನ್ನ ಅನುಮತಿ ಇಲ್ಲದೆ ವರ್ಗಾವಣೆ ಪಡೆದಿದ್ದಾಳೆ. ಎಲ್ಲ ಹಣವನ್ನೂ ಅವರಿಗೇ ಕೊಡುತ್ತಿದ್ದಾಳೆ.
ಈಗ ವಿಚ್ಛೇದನ ಕೊಡು ಇಲ್ಲದಿದ್ದರೆ ನಾನೇ ಕೋರ್ಟಿಗೆ ಹೋಗುತ್ತೇನೆ ಎನ್ನುತ್ತಿದ್ದಾಳೆ. ಅವರ ಅಣ್ಣಂದಿರ ದುರುದ್ದೇಶ ಅವಳಿಗೆ ತಿಳಿಯುತ್ತಿಲ್ಲ. ಈಗ ಅವಳು ಕೋರ್ಟಿಗೆ ಹೋದರೆ ನನಗೆ ಅವಳಿಂದ ಪರಿಹಾರ ಸಿಗುತ್ತದೆಯೇ? ಅವಳು ಮದುವೆಗೆ ಮುಂಚೆ ಕೊಟ್ಟ ಮಾತಿನಂತೆ ನನಗೆ ಕೊಡಬೇಕಾದ ಸಂಬಳ ಕೊಡುವಂತೆ ಮಾಡಲು ಸಾಧ್ಯವೇ? ಅವಳ ಹೆಸರಿನಲ್ಲಿರುವ ಮನೆಯಲ್ಲಿ ನನಗೆ ಅರ್ಧ ಭಾಗ ಇದೆಯೇ? ಇವೆಲ್ಲಾ ಗೊತ್ತಿದ್ದರೆ ನಾನು ಅಂಗವಿಕಲಳನ್ನು ಮದುವೆಯೇ ಆಗುತ್ತಿರಲಿಲ್ಲ. ಅವಳು ಮೋಸ ಮಾಡಿದ್ದಕ್ಕೆ ಶಿಕ್ಷೆ ಇದೆಯೇ?
ಉತ್ತರ: ಪತ್ನಿಯ ಸಂಪಾದನೆಯಲ್ಲಿ, ಮತ್ತು ಪತ್ನಿಯ ಹೆಸರಿನಲ್ಲಿ ಇರುವ ಆಸ್ತಿಯಲ್ಲಿ ಆಕೆ ಬದುಕಿರುವಾಗ ಪತಿಗೆ ಯಾವ ಅಧಿಕಾರವೂ ಇರುವುದಿಲ್ಲ. ಈ ಬಗ್ಗೆ ನೀವು ಕೋರ್ಟಿನಲ್ಲಿ ಕೇಳಿದರೆ ನಗೆಪಾಟಲಿಗೆ ಈಡಾಗುತ್ತೀರಿ. ಒಂದು ವೇಳೆ ವಿಚ್ಛೇದನ ಪಡೆಯದೇ, ನಿಮ್ಮ ಪತ್ನಿ ತೀರಿಕೊಂಡರೆ, ಆಕೆಯ ಹೆಸರಿನಲ್ಲಿ ಉಳಿದ ಚರ ಸ್ಥಿರ ಆಸ್ತಿಗಳಲ್ಲಿ ನಿಮಗೆ ಭಾಗ ಸಿಗುತ್ತದೆ.
ಒಂದು ವೇಳೆ ಆಕೆ ತನ್ನ ಜೀವಿತ ಕಾಲದಲ್ಲೇ ಬೇರೆಯವರಿಗೆ ವಿಲ್/ದಾನ ಮಾಡಿದ್ದರೆ, ಆಗ ಅದೂ ನಿಮಗೆ ಸಿಗುವುದಿಲ್ಲ. ಒಂದು ವೇಳೆ ನೀವು ಧೃಢಕಾಯರಾಗಿ ಇಲ್ಲದೇ ಇದ್ದು, ನಿಮ್ಮನ್ನು ನೀವು ಪೋಷಿಸಿಕೊಳ್ಳಲು ಸಾಧ್ಯ ಇರದ ಖಾಯಿಲೆ ಇತ್ಯಾದಿಗಳಿಂದ ಬಳಲುತ್ತಿದ್ದರೆ, ಆಗ ನೀವು ನಿಮ್ಮ ಪತ್ನಿಯಿಂದ ತಿಂಗಳಿಗೆ ಇಷ್ಟು ಎಂದು ಜೀವನಾಂಶ ಪಡೆಯಬಹುದು ಅಷ್ಟೇ.
ನಿಮಗೆ ಅವಳ ಸಂಬಳವೂ ಸಿಗುವುದಿಲ್ಲ ಮತ್ತು ಮನೆಯಲ್ಲಿ ಒಂದು ನಯಾ ಪೈಸೆ ಭಾಗವೂ ಸಿಗುವುದಿಲ್ಲ. ನೀವು ಅಂಗವಿಕಲರಾದವರನ್ನು ಮದುವೆ ಆಗ ಬೇಕು ಎಂದು ಯಾರೂ ನಿಮ್ಮನ್ನು ಒತ್ತಾಯ ಮಾಡಲಿಲ್ಲ. ನಿಮಗೆ ಇಷ್ಟವಿಲ್ಲದೇ ಹೋದರೆ ಮದುವೆಗೆ ಒಪ್ಪಬಾರದಿತ್ತು. ಈಗ ಅವಳಿಂದ ಪರಿಹಾರ ನಿರೀಕ್ಷಿಸಿದರೆ, ನೀವೇ ತಪ್ಪು ಮಾಡಿದಂತೆ ಆಗುತ್ತದೆ.
ಪತ್ನಿಯ ಸಂಪಾದನೆಯನ್ನೆಲ್ಲಾ ಪತಿಗೇ ಕೊಡಬೇಕು ಎಂದು ಬಯಸುವುದೂ, ನಿರೀಕ್ಷಿಸುವುದೂ ಸಹ ಸರಿಯಲ್ಲ. ನೀವು ಈ ಯೋಚನೆಗಳನ್ನು ಪಕ್ಕಕ್ಕೆ ಇಟ್ಟು ಆಕೆಯ ಮನಸ್ಸನ್ನು ಪ್ರೀತಿ ವಿಶ್ವಾಸದಿಂದ ಗೆದ್ದುಕೊಳ್ಳುವುದು ಒಳ್ಳೆಯದು. ಆಕೆಯಿಂದ ಒಂದು ಪೈಸೆಯನ್ನೂ ನಿರೀಕ್ಷಿಸದೇ ಇದ್ದರೆ ನಿಮ್ಮ ದಾಂಪತ್ಯವಾದರೂ ಸರಿಹೋಗಬಹುದು.