ನ್ಯೂಸ್

ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚು: ಖ್ಯಾತ ಹಾಲಿವುಡ್​ ನಟಿ ಸಜೀವ ದಹನ! Los Angeles Wildfires

Los Angeles Wildfires : ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಈಗಾಗಲೇ ಅನೇಕ ಕಟ್ಟಡಗಳು ಮತ್ತು ಸಾವಿರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳು ಬೆಂಕಿಯ ಪಾಲಾಗಿವೆ. ಇದರ ನಡುವೆ ಹಾಲಿವುಡ್ ನಟಿ ಡಾಲಿಸ್ ಕರಿ (95) ಅವರು ಸಜೀವ ದಹನವಾಗಿರುವ ಸುದ್ದಿ ಹೊರಬಿದ್ದಿದೆ.

ಡಾಲಿಸ್​ ಕರಿ ಅವರು ದಿ ಬ್ಲೂಸ್ ಬ್ರದರ್ಸ್, ದಿ ಟೆನ್ ಕಮಾಂಡ್‌ಮೆಂಟ್ಸ್ ಮತ್ತು ಲೇಡಿ ಸಿಂಗ್ಸ್ ದಿ ಬ್ಲೂಸ್‌ ಸಿನಿಮಾಗಳಲ್ಲಿ ತಮ್ಮ ಪಾತ್ರಗಳಿಂದಲೇ ಹೆಸರುವಾಸಿಯಾಗಿದ್ದರು. ಕ್ಯಾಲಿಫೋರ್ನಿಯಾದ ಅಲ್ಟಡೆನಾದಲ್ಲಿರುವ ಅವರ ಮನೆ ಬೆಂಕಿಯನಲ್ಲಿ ಸುಟ್ಟುಕರಲಾಗಿದ್ದು, ಡಾಲಿಸ್​ ಕರಿ ಅವರು ಕೂಡ ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ಮೊಮ್ಮಗಳು ಡಾಲಿಸ್ ಕೆಲ್ಲಿ, ಕರಿಯ ನಿಧನವನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಖಚಿತಪಡಿಸಿದ್ದಾರೆ.

ಡಾಲಿಸ್ ಕರಿ ಕೊನೆಯ ಬಾರಿಗೆ ಜನವರಿ 7ರಂದು ಸಂಜೆ ಕಾಣಿಸಿಕೊಂಡರು. ಅವರ ಮೊಮ್ಮಗಳು ಕೆಲ್ಲಿ, ಕರಿಯನ್ನು ಮನೆಯಲ್ಲಿ ಬಿಟ್ಟುಬಂದಿದ್ದರು. ಮರುದಿನ ಬೆಳಗ್ಗೆ ಕರಿಯನ್ನು ಹುಡುಕಲು ಕೆಲ್ಲಿ ಪ್ರಯತ್ನಿಸಿದರು. ಆದರೆ, ಕರಿ ಎಲ್ಲಿಯೂ ಸಿಗಲಿಲ್ಲ. ಹತ್ತಿರದ ಆಶ್ರಯ ತಾಣಗಳಿಗೆ ಹೋಗಿ ನೋಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ಕರಿ ಅವರು ಬೆಂಕಿಯಲ್ಲಿ ಸಜೀವ ದಹನಗೊಂಡು ದುರಂತ ಸಾವಿಗೀಡಾಗಿದ್ದಾರೆ. ಡಾಲಿಸ್ ಕೆಲ್ಲಿ ಜನವರಿ 12 ರಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಜ್ಜಿ ನಿಧನರಾಗಿದ್ದಾರೆಂದು ಘೋಷಿಸಿದ್ದಾರೆ.

ಡಾಲಿಸ್ ಕರಿ ನಿಧನಕ್ಕೆ ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಸೇವೆಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವೃದ್ಧಾಪ್ಯದಲ್ಲೂ ಅವರು ತುಂಬಾ ಸಕ್ರಿಯರಾಗಿದ್ದರು. ಆದರೆ, ಬೆಂಕಿಗೆ ಬಲಿಯಾಗಿದ್ದು, ನಿಜಕ್ಕೂ ಬೇಸರದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ. (ಏಜೆನ್ಸೀಸ್​)