

Baba Abhay Singh : ನಿನ್ನೆಯಿಂದ (ಜ.13) ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ಆರಂಭವಾಗಿದೆ. ಇದು ಜಗತ್ತಿನ ಅತಿದೊಡ್ಡ ಧಾರ್ಮಿಕ ಉತ್ಸವವಾಗಿದ್ದು, 144 ವರ್ಷಗಳಿಗೊಮ್ಮೆ ಮಹಾ ಕುಂಭಮೇಳ ನಡೆಯುತ್ತದೆ. ಪ್ರತಿ 12 ವರ್ಷಗಳಿಗೊಮ್ಮೆ ಸಾಮಾನ್ಯ ಕುಂಭಮೇಳ ನಡೆಯುತ್ತದೆ. ಪ್ರಸ್ತುತ ಮಹಾ ಕುಂಭಮೇಳದ ಭಾಗವಾಗಿ ಸನ್ಯಾಸಿಗಳು, ಧಾರ್ಮಿಕ ಮುಖಂಡರು ಮತ್ತು ಭಕ್ತರು ಸೇರಿದಂತೆ ಒಂದೂವರೆ ಕೋಟಿಗೂ ಅಧಿಕ ಜನರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಶಾಹಿ ಸ್ನಾನ ಮಾಡಿದ್ದಾರೆ. ಈ ಎಲ್ಲ ಜನಸಂದಣಿಯ ನಡುವೆ, ಓರ್ವ ವ್ಯಕ್ತಿ ಮಾತ್ರ ವಿಶೇಷ ಗಮನ ಸೆಳೆದರು. ಅವರೇ 'ಐಐಟಿ ಸ್ವಾಮಿ'.
ಶಾಂತ ನಗು, ಹರ್ಷಚಿತ್ತ ಮುಖ, ಮಾತುಗಳಲ್ಲಿ ಬುದ್ಧಿವಂತಿಕೆ ಮತ್ತು ಹೊಳೆಯುವ ಕಣ್ಣುಗಳು... ಇದು ಐಐಟಿ ಸ್ವಾಮಿ ಮಸಾನಿ ಗೋರಖ್ (ಅಭಯ್ ಸಿಂಗ್) ಅವರನ್ನು ನೋಡಿದವರು ಹೇಳುವ ಮಾತುಗಳು. ಈ ಮಸಾನಿ ಗೋರಖ್, ಬಾಂಬೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ವ್ಯಕ್ತಿ. ಉನ್ನತ ಶಿಕ್ಷಣ ಮುಗಿಸಿದ ಬಳಿಕ ಕೆಲ ಕಾಲ ಹೆಚ್ಚಿನ ಸಂಬಳದ ಉದ್ಯೋಗವನ್ನು ಸಹ ಮಾಡಿದರು. ಆದರೆ, ಕೆಲಸವನ್ನು ತೊರೆದರು. ಅದಕ್ಕೆ ಕಾರಣ ಆಧ್ಯಾತ್ಮದ ಸೆಳೆತ. ದೈವತ್ವವನ್ನು ಅರ್ಥಮಾಡಿಕೊಂಡು, ಸನ್ಯಾಸತ್ವವನ್ನು ಸ್ವೀಕರಿಸಿದರು. ತಮ್ಮ ಹೆಸರನ್ನು ಅಭಯ್ ಸಿಂಗ್ನಿಂದ ಮಸಾನಿ ಗೋರಖ್ ಎಂದು ಬದಲಾಯಿಸಿಕೊಂಡರು.
ಮಸಾನಿ ಗೋರಖ್ ಅವರು ತಮ್ಮ ಜೀವನವನ್ನು ಶಿವನಿಗೆ ಅರ್ಪಿಸಿಕೊಂಡಿರುವುದಾಗಿ ಹೇಳುತ್ತಾರೆ. ಮಸಾನಿ ಗೋರಖ್ ಅವರನ್ನು ರಾಘವ್ ಮತ್ತು ಜಗದೀಶ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹರಿಯಾಣ ಮೂಲದ ಅವರು ಐಐಟಿಯಲ್ಲಿ ನಾಲ್ಕು ವರ್ಷಗಳ ಕಾಲ ಅಧ್ಯಯನ ಮಾಡಿದ ನಂತರ ಡಿಸೈನರ್ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದರು. ಅವರು ಛಾಯಾಗ್ರಾಹಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ, ಭೌತಶಾಸ್ತ್ರ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜೀವನ ಏನೆಂಬುದನ್ನು ಅರ್ಥಮಾಡಿಕೊಳ್ಳಲು ಆಧುನಿಕೋತ್ತರ ಕೋರ್ಸ್‌ಗಳನ್ನು ಮತ್ತು ಸಾಕ್ರಟೀಸ್ ಮತ್ತು ಪ್ಲೇಟೋ ಅವರ ಬಗ್ಗೆಯೂ ಅಧ್ಯಯನ ಮಾಡಿರುವುದಾಗಿ ಮಸಾನಿ ಗೋರಖ್ ಹೇಳಿದರು.
ತನ್ನ ನಿರ್ಧಾರದ ಬಗ್ಗೆ ಇತರರು ಏನು ಯೋಚಿಸುತ್ತಾರೆ ಎಂಬುದು ನನಗೆ ಮುಖ್ಯವಲ್ಲ, ನನಗೆ ಸಂತೋಷವನ್ನುಂಟುಮಾಡುವ ಕೆಲಸಗಳನ್ನು ಮಾಡುತ್ತಾ ತನ್ನ ಜೀವನವನ್ನು ನಡೆಸಬೇಕು. ಅದಕ್ಕಾಗಿಯೇ ನಾನು ಆಧ್ಯಾತ್ಮಿಕ ಮಾರ್ಗವನ್ನು ಆರಿಸಿಕೊಂಡೆ ಎಂದು ಮಸಾನಿ ಗೋರಖ್ ತಿಳಿಸಿದ್ದಾರೆ.
ಅಂದಹಾಗೆ ನಿನ್ನೆಯಿಂದ ಆರಂಭವಾಗಿರುವ ಮಹಾ ಕುಂಭಮೇಳವೂ ಫೆಬ್ರವರಿ 26 ರವರೆಗೆ 45 ದಿನಗಳ ಕಾಲ ನಡೆಯಲಿದೆ. ಈ ವರ್ಷ ಮಹಾ ಕುಂಭಮೇಳಕ್ಕೆ 40 ಕೋಟಿಗೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಉತ್ತರ ಪ್ರದೇಶ ಸರ್ಕಾರ ಅಂದಾಜಿಸಿದೆ. ಮೊದಲ ದಿನವೇ ಒಂದೂವರೆ ಕೋಟಿಗೂ ಅಧಿಕ ಮಂದಿ ಭಾಗವಹಿಸಿದ್ದರು. ಕೊನೆಯ ದಿನವಾದ ಶಿವರಾತ್ರಿಯೊಂದಿಗೆ ಮಹಾ ಕುಂಭಮೇಳ ಸಂಪನ್ನಗೊಳ್ಳಲಿದೆ.
ಹತ್ತು ಸಾವಿರ ಎಕರೆಗಳಲ್ಲಿ ಕುಂಭಮೇಳಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದೆ. ಬರುವ ಯಾತ್ರಿಕರು ಯಾವುದೇ ಅನಾನುಕೂಲತೆಯನ್ನು ಎದುರಿಸದಂತೆ ನೋಡಿಕೊಳ್ಳಲು 1.6 ಲಕ್ಷ ಡೇರೆಗಳು ಮತ್ತು 1.5 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಭದ್ರತೆಗಾಗಿ 55 ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗಿದೆ ಮತ್ತು 45 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕನ್ನಡ ಸೇರಿದಂತೆ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭಾಷೆಗಳಲ್ಲಿ ಸೇವೆಗಳನ್ನು ಒದಗಿಸುವ ಕಾಲ್ ಸೆಂಟರ್‌ಗಳನ್ನು ಸಹ ಯುಪಿ ಸರ್ಕಾರ ಸ್ಥಾಪಿಸಿದೆ.
ಗಂಗಾ, ಯಮುನಾ ಮತ್ತು ಸರಸ್ವತಿ ಎಂಬ ಮೂರು ನದಿಗಳ ಸಂಗಮವನ್ನು ತ್ರಿವೇಣಿ ಸಂಗಮ ಎಂದು ಕರೆಯಲಾಗುತ್ತದೆ. ಈ ಮೂರು ನದಿಗಳು ಪ್ರಯಾಗ್‌ರಾಜ್‌ನ ಸಂಗಮದಲ್ಲಿ ಸಂಗಮಿಸುತ್ತವೆ. ಇದು ಪ್ರಯಾಗ್‌ರಾಜ್ ಅನ್ನು ಪ್ರಸಿದ್ಧ ಯಾತ್ರಾ ಸ್ಥಳವನ್ನಾಗಿ ಮಾಡಿದೆ. ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನವು ವಿಶೇಷ ಮಹತ್ವವನ್ನು ಹೊಂದಿದೆ. ಇದನ್ನು ಅಮೃತ ಸ್ನಾನವೆಂದು ಸಹ ಕರೆಯುತ್ತಾರೆ. ಶಾಹಿ ಸ್ನಾನದ ಸಮಯದಲ್ಲಿ ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ತೊಳೆದು ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. (ಏಜೆನ್ಸೀಸ್)