ನ್ಯೂಸ್

ರಸ್ತೆಯಲ್ಲಿ ಮಲಗಿದ್ದ ಅಲೆಮಾರಿಗಳ ಮೇಲೆ ಹರಿದ ಲಾರಿ... ಮಕ್ಕಳಿಬ್ಬರು ಸೇರಿ ಐವರ ದುರಂತ ಸಾವು | Lorry Accident

ಕೇರಳ: ಅತಿ ವೇಗವಾಗಿ ಬಂದ ಲಾರಿಯೊಂದು ರಸ್ತೆಪಕ್ಕ ಮಲಗಿದ್ದ ಅಲೆಮಾರಿಗಳ ಮೇಲೆ ಹರಿದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಐವರು ಮೃತಪಟ್ಟಿರುವ(Lorry Accident) ದಾರುಣ ಘಟನೆ ಇಲ್ಲಿನ ತ್ರಿಶೂರು ಜಿಲ್ಲೆಯ ನಾಟಿಕ ಎಂಬಲ್ಲಿ ನಡೆದಿದೆ.

ಈ ಘಟನೆಯು ಮಂಗಳವಾರ (ನ.26) ಮುಂಜಾನೆ ಸುಮಾರು 4 ಗಂಟೆಗೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದಾರೆ. ಸರ್ಕಾರಿ ವೈದ್ಯಕೀಯ ಆಸ್ಪತ್ರೆಯಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಸ್ಥಳೀಯರಾದ ಕಾಳಿಯಪ್ಪನ್​(50), ನಾಗಮ್ಮ(39), ಬಂಗಾಜಿ(20), ಜೀವನ್​(4) ಮತ್ತು ವಿಶ್ವ(1) ಮೃತರು. ಕಣ್ಣೂರು ಮೂಲದ ಲಾರಿ ಚಾಲಕ ಅಲೆಕ್ಸ್​(35) ಮತ್ತು ಕ್ಲೀನರ್​ ನನ್ನು ಪೊಲೀಸರು ಬಂಧಿಸಿದ್ದಾರೆ. ಮರದ ತುಂಡುಗಳನ್ನು ಲಾರಿ ಸಾಗಿಸುತ್ತಿತ್ತು ಎಂದು ಹೇಳಲಾಗಿದೆ. ಕಣ್ಣೂರಿನಿಂದ ಕೊಚ್ಚಿಗೆ ಲಾರಿ ತೆರಳುತ್ತಿದ್ದು, ರಸ್ತೆಯ ಬದಿಯಲ್ಲಿ ಮಲಗಿದ್ದವರ ಮೇಲೆ ಹರಿದಿದೆ. ಇನ್ನು ಚಾಲಕ ಮತ್ತು ಕ್ಲೀನರ್ ಪಾನಮತ್ತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

''ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವಾಹನ ಸಂಚರಿಸಲು ಅವಲಕಾಶವೆ ಇಲ್ಲ. ಅಲ್ಲದೇ, ಬ್ಯಾರಿಕೇಡ್​ಗಳನ್ನು ಕೂಡ ಹಾಕಲಾಗಿದೆ. ಹೀಗಾಗಿ, ಸುರಕ್ಷತೆಯ ಖಾತರಿಪಡಿಸಿಕೊಂಡು ಅಲೆಮಾರಿ ಜನ ಮಲಗಿದ್ದಾರೆ. ಆದರೂ, ಅಪಘಾತ ಸಂಭವಿಸಿದೆ. ಚಾಲಕ ಮತ್ತು ಕ್ಲೀನರ್​ ಪಾನಮತ್ತರಾಗಿದ್ದರಿಂದ ರಸ್ತೆ ಬಿಟ್ಟು ಬ್ಯಾರಿಕೇಡ್​ಗಳ ಕಡೆ ವೇಗವಾಗಿ ನುಗ್ಗಿಸಿದ್ದಾರೆ. ಇದರಿಂದಾಗಿ ಈ ದುರಂತ ಘಟನೆ ನಡೆದಿದೆ. ಇಬ್ಬರನ್ನು ಬಂಧಿಸಿದ್ದು, ಕೋರ್ಟ್​ಗೆ ಹಾಜರುಪಡಿಸಿ ತನಿಖೆ ಕೈಗೊಳ್ಳಲಾಗುವುದು'' ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್​).