ನ್ಯೂಸ್

ಧಾರವಾಡದಲ್ಲಿ ಅಪಘಾತ: ಸಾವಲ್ಲೂ ಒಂದಾದ ಬಾಲ್ಯ ಸ್ನೇಹಿತೆಯರು, ಅವರ ಮಕ್ಕಳೇ ಹೊರತಂದ ಈ ವಿಡಿಯೋ ಮನಕಲಕುತ್ತೆ!

ಬೆಂಗಳೂರು: 2021ರ ಜ.15ರ ಬೆಳ್ಳಂಬೆಳಗ್ಗೆ ಧಾರವಾಡದ ಇಟ್ಟಿಗಟ್ಟಿ ಬಳಿ ಲಾರಿ ಮತ್ತು ಮಿನಿಬಸ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ವೈದ್ಯೆ ಸೇರಿ ಪ್ರತಿಷ್ಠಿತ ಕುಟುಂಬಗಳ ಮಹಿಳೆಯರು ಮೃತಪಟ್ಟ ಸುದ್ದಿ ದಾವಣಗೆರೆ ಮಾತ್ರವಲ್ಲ, ಇಡೀ ರಾಜ್ಯದ ಜನರಿಗೆ ಬರಸಿಡಿಲಿನಂತೆ ಎರಗಿತ್ತು.

ದಾವಣಗೆರೆ ನಗರದ ಸೇಂಟ್​ ಪಾಲ್ಸ್​ ಕಾನ್ವೆಂಟ್​ ಶಾಲೆಯ 1989ರ ಸಾಲಿನ ವಿದ್ಯಾರ್ಥಿಗಳಾಗಿದ್ದ ಇವರು ಬಾಲ್ಯದ ಗೆಳತಿಯರು. ಸಂಕ್ರಾಂತಿ ಹಬ್ಬದ ಖುಷಿಯ ನಡುವೆ ಗೋವಾ ಪ್ರವಾಸಕ್ಕೆ ಹೊರಟಿದ್ದರು. ಪ್ರವಾಸಕ್ಕೆಂದು ಟಿಟಿ ವಾಹನ ಹತ್ತುತ್ತಿದ್ದಂತೆ ಬಾಲ್ಯದ ಸ್ನೇಹಿತೆಯರೆಲ್ಲರೂ ಮೊಬೈಲ್​ನಲ್ಲಿ ಸೆಲ್ಫಿ ಫೋಟೋ ಕ್ಲಿಕ್ಕಿಸಿಕೊಂಡು ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ 'ಗೋ ಗೋವಾ ವಿಥ್​ ಸ್ಕೂಲ್​ ಬುಡ್ಡೀಸ್​' ಎಂದು ಹಾಕಿಕೊಂಡಿದ್ದರು. ಅವರು ಬದುಕಿದ್ದಾಗ ತೆಗೆದ ಕೊನೇ ಫೋಟೋ ಇದೇ. ಇದೀಗ ಸಾವಿಗೂ ಮುನ್ನ ಆ ಸ್ನೇಹಿತೆಯರ ಸುಂದರ ಕ್ಷಣಗಳು ಹೇಗಿತ್ತು? ಎಂಬುದರ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೃತರ ಮಕ್ಕಳೇ ಈ ವಿಡಿಯೋವನ್ನು ಹರಿಯಬಿಟ್ಟಿದ್ದಾರೆ ಎನ್ನಲಾಗಿದ್ದು, ಇದನ್ನು ನೋಡಿದ ಎಂಥವರಿಗೂ ಕಣ್ಣಲ್ಲಿ ನೀರು ಬರದೆ ಇರದು.

ಬಾಲ್ಯ ಸ್ನೇಹಿತೆಯರು ಜೀವಂತವಾಗಿದ್ದಾಗ ಒಟ್ಟಾಗಿ ಕಳೆದ ಆ ಸುಂದರ ಕ್ಷಣಗಳ ದೃಶ್ಯದ ತುಣುಕಿಗೆ

ಕೂಗಿ ಕೂಗಿ ಕರೆಯುತ್ತಿರೋ

ಕಣ್ಣ ಹನಿಯ ಧನಿ ಕೇಳದೆ

ಮಂಡಿ ಊರಿ ಮರಗುತ್ತಿರೋ

ಮನದ ನೋವು ಮನ ಮುಟ್ಟದೆ

ಕೈಯ ಮುಗಿವೆನಾ ಹೇಗಾದರೂ

ನೀ ನನ್ನ ಜೊತೆಯೆ ಇರು

ಬಿಟ್ಟೋಗ್ಬೇಡಾ ನನ್ನಾ ಬಿಟ್ಟೋಗ್ಬೇಡಾ...

ಬಿಟ್ಟೋಗ್ಬೇಡಾ ನನ್ನಾ ಬಿಟ್ಟೋಗ್ಬೇಡಾ... ಈ ಹಾಡನ್ನು ಹಿನ್ನೆಲೆಯಾಗಿ ಬಳಸಲಾಗಿದೆ. ಈ ವಿಡಿಯೋ ನೋಡ್ತಿದ್ರೆ ಮನಕಲಕುತ್ತೆ.

ಅಪಘಾತದಲ್ಲಿ ದಾವಣಗೆರೆಯ ಪ್ರೀತಿ ರವಿಕುಮಾರ್​(46), ಪರಂಜ್ಯೋತಿ ಶಶಿಧರ ಹೂಂಚೂರ (47), ವಷಿರ್ತಾ ವೀರೇಶ (46), ಮಂಜುಳಾ ನಟೇಶ್​ ಜಿ.ಬಿ. (47), ರಾಜೇಶ್ವರಿ ಶಿವಕುಮಾರ ಬಂಡಮ್ಮನವರ (46), ಡಾ. ವೀಣಾ ಪ್ರಕಾಶ ಮಟ್ಟಿಹಳ್ಳಿ (47), ಕ್ಷೀರಾ ಸುರೇಶಬಾಬು ಪೊರಾಳ (21), ಹೇಮಲತಾ ಕೆ. ಉರ್ಫ್​ ಮಾನಸಿ (48) ಸೇರಿ 9 ಮಂದಿ ಮಹಿಳೆಯರು, ಮಿನಿ ಬಸ್​ ಚಾಲಕ ರಾಣೆಬೆನ್ನೂರು ಮೂಲದ ರಾಜು ಸೋಮಪ್ಪಾ ಗೋರಬಣ್ಣವರ (38), ಕ್ಲೀನರ್​ ಮಲ್ಲಿಕಾರ್ಜುನ ಉಡಗಟ್ಟಿ (27) ಮೃತಪಟ್ಟಿದ್ದರು. ಅಪಘಾತದ ರಭಸಕ್ಕೆ ಮಿನಿಬಸ್​ ನಜ್ಜುಗುಜ್ಜಾಗಿದ್ದರಿಂದ ಪ್ರಯಾಣಿಕರ ಮುಖ, ಮೃತದೇಹ ಗುರುತು ಸಿಗದಂತಾಗಿತ್ತು.