ನವದೆಹಲಿ: ರಾಷ್ಟ್ರ ರಾಜಕಾರಣದಲ್ಲಿ ಗಮನ ಸೆಳೆದಿರುವ ಮಹಾರಾಷ್ಟ್ರ ಹಾಗೂ ಜಾರ್ಖಂಡ್ ವಿಧಾನಸಭೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ. ಮಹಾರಾಷ್ಟ್ರದ ಎಲ್ಲ 288 ಸ್ಥಾನಗಳಿಗೆ ಒಂದೇ ಹಂತದಲ್ಲಿ ಹಾಗೂ ಜಾರ್ಖಂಡ್ನ 43 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಬುಧವಾರ ಮತದಾನ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗೆ ಸೇರಿದೆ. ಮತದಾನೋತ್ತರ ಸಮೀಕ್ಷೆಗಳ ವರದಿ ಬಹಿರಂಗಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮುಂದಿದೆ. ಒಟ್ಟು ಸಮೀಕ್ಷೆಗಳ ಪೈಕಿ ಶೇ. 60 ಸಮೀಕ್ಷೆಗಳು ಎನ್ಡಿಎ ಸರಳ ಬಹುಮತ ಪಡೆಯಬಹುದೆಂದು ಹೇಳಿದರೆ, ಪಕ್ಷೇತರರು, ಸಣ್ಣಪುಟ್ಟ ಪಕ್ಷಗಳ ಫಲಿತಾಂಶ ಕೊಂಚ ವ್ಯತ್ಯಾಸವಾದರೆ ಇಂಡಿಯಾ ಒಕ್ಕೂಟಕ್ಕೂ ಅದೃಷ್ಟ ಖುಲಾಯಿಸುವ ಸಾಧ್ಯತೆಯೂ ಇಲ್ಲದಿಲ್ಲ. ಇನ್ನು ಕರ್ನಾಟಕದಲ್ಲಿ ಉಪ ಚುನಾವಣೆ ನಡೆದ ಮೂರು ಕ್ಷೇತ್ರಗಳ ಪೈಕಿ ಶಿಗ್ಗಾಂವಿ, ಚನ್ನಪಟ್ಟಣದಲ್ಲಿ ಬಿಜೆಪಿ, ಜೆಡಿಎಸ್ ದೋಸ್ತಿ ಪಕ್ಷಗಳು ಗೆಲುವು ಸಾಧಿಸಿದರೆ, ಸಂಡೂರು ಕಾಂಗ್ರೆಸ್ ಪಾಲಾಗಬಹುದೆಂದು ಹೇಳಲಾಗಿದೆ. ಈ ಕುತೂಹಲಕ್ಕೆ ನ.23ರಂದು ತೆರೆ ಬೀಳಲಿದೆ.
ಮಹಾರಾಷ್ಟ್ರದ ಎಲ್ಲ 288 ಸ್ಥಾನಗಳು ಹಾಗೂ ಜಾರ್ಖಂಡ್ನ 38 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಸಂಜೆ ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾದ ಮತದಾನೋತ್ತರ ಸಮೀಕ್ಷೆಗಳು ಎರಡೂ ಕಡೆ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತದ ಭವಿಷ್ಯ ನುಡಿದಿವೆ. ಜಾರ್ಖಂಡ್ ಅಸೆಂಬ್ಲಿ ಒಟ್ಟು 81 ಸ್ಥಾನಗಳನ್ನು ಹೊಂದಿದ್ದು, ಬಾಕಿ 43 ಕ್ಷೇತ್ರಗಳಿಗೆ ನ. 13ರಂದು ಮತದಾನ ನಡೆದಿತ್ತು. ನ.23ರಂದು ಎಲ್ಲ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. ಬಹುತೇಕ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮಹಾಯುತಿಗೆ (ಬಿಜೆಪಿ, ಶಿವಸೇನೆ (ಏಕನಾಥ ಶಿಂಧೆ ಬಣ) ಹಾಗೂ ಎನ್ಸಿಪಿ (ಅಜಿತ್ ಪವಾರ್ ಬಣ) ಜೈಕಾರ ಹೇಳಿವೆ. ಮಾರ್ಟಿಜ್, ಪೀಪಲ್ಸ್ ಪಲ್ಸ್, ಚಾಣಕ್ಯ ಮುಂತಾದ ಸಂಸ್ಥೆಗಳು ಮಹಾಯುತಿ ಸ್ಪಷ್ಟ ಬಹುಮತ ಗಳಿಸಿ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಿವೆ. ಆದರೆ ಮೂರು ಸಂಸ್ಥೆಗಳು ಅತಂತ್ರ ವಿಧಾನಸಭೆಯನ್ನು ಅಂದಾಜಿಸಿವೆ. ಸ್ವತಂತ್ರ ಅಭ್ಯರ್ಥಿಗಳ ಬೆಂಬಲವಿಲ್ಲದೆ ಸರ್ಕಾರ ರಚನೆ ಅಸಾಧ್ಯ ಎಂಬುದು ಈ ಸಮೀಕ್ಷೆಗಳ ಇಂಗಿತ. ಮಹಾ ವಿಕಾಸ ಅಘಾಡಿ (ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ) ಹಾಗೂ ಎನ್ಸಿಪಿ (ಶರದ್ ಪವಾರ್ ಬಣ)ಯ ಅಧಿಕಾರದ ಕನಸು ಈಡೇರುವ ಸಾಧ್ಯತೆ ಕಡಿಮೆ ಎಂಬುದು ಬಹುತೇಕ ಸಮೀಕ್ಷೆಗಳ ಒಟ್ಟಾರೆ ಸಾರಾಂಶ.
ದೆಹಲಿ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಗ್ಲೋಬಲ್ ಸ್ಟಡಿಸ್ (ಸಿಜಿಎಸ್) ಕೂಡ ಎರಡೂ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ್ರೂಟದ ಗೆಲುವನ್ನು ಊಹಿಸಿದೆ. ಜಾರ್ಖಂಡ್ನಲ್ಲಿ ಕೂಡ ಹೆಚ್ಚಿನ ಸಮೀಕ್ಷೆಗಳು ಎನ್ಡಿಎ ಮೈತ್ರಿಕೂಟದ ಗೆಲುವನ್ನು ಅಂದಾಜಿಸಿವೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಛೋಟಾನಾಗ್ಪುರದಲ್ಲಿ ಎನ್ಡಿಎ ಮತ್ತು ಸಂತಾಲ್ ಪರಗಣದಲ್ಲಿ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸೀಟುಗಳು ದಕ್ಕಬಹುದು ಎನ್ನಲಾಗಿದೆ. ಒಂದು ಸಮೀಕ್ಷೆಯು ಜೆಎಂಎಂ ಮೈತ್ರಿಗೆ ಹೆಚ್ಚು ಸ್ಥಾನಗಳನ್ನು ನೀಡಿದೆ. 2019ರಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟ 47 ಸೀಟುಗಳನ್ನು ಹಾಗೂ ಎನ್ಡಿಎ ಮೈತ್ರಿಕೂಟ 25 ಸೀಟುಗಳನ್ನು ಗೆದ್ದಿದ್ದವು.