ನ್ಯೂಸ್

ಈ ಮೂರು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾಗಳ ಒಟ್ಟು ಬಜೆಟ್ ಎಷ್ಟಿದೆ ಗೊತ್ತೇ? ಇಲ್ಲಿದೆ ವರದಿ

ಹೈದರಾಬಾದ್: ಕಳೆದ ವರ್ಷಕ್ಕಿಂತ ಈ ವರ್ಷದ ಜನವರಿಯಲ್ಲಿ ಟಾಲಿವುಡ್​ ಅಂಗಳದಿಂದ ಸಾಲು ಸಾಲು ಸೂಪರ್​​ಹಿಟ್ ಸಿನಿಮಾಗಳು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಕೆಲವು ಬ್ಲಾಕ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿದರೆ, ಇನ್ನು ಕೆಲವು ಫ್ಲಾಪ್​ ಪಟ್ಟಿಗೆ ಸೇರಿತು. ಆದರೆ, ಈ ಬಾರಿ ತೆರೆಕಾಣಲು ಸಿದ್ಧವಿರುವ ಬಹುನಿರೀಕ್ಷಿತ ಫಿಲ್ಮ್​ಗಳ ಪೈಕಿ ತೆಲುಗು ಚಿತ್ರರಂಗದ ಮೂರು ಸ್ಟಾರ್​ ನಟರ ಚಿತ್ರಗಳು ಬಿಡುಗಡೆಯತ್ತ ಮುಖಮಾಡುತ್ತಿವೆ. ಈ ಚಿತ್ರಗಳ ಒಟ್ಟು ಬಜೆಟ್​ ಎಷ್ಟಿದೆ? ಎಂಬುದರ ಮಾಹಿತಿ ಹೀಗಿದೆ ಗಮನಿಸಿ.

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ಅಭಿನಯದ 'ಬಾಹುಬಲಿ', ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಲನಚಿತ್ರಗಳು ಬ್ಲಾಕ್​ಬಸ್ಟರ್​ ಹಿಟ್ ಆಗುವ ಮೂಲಕ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿತು. ಈ ಸಿನಿಮಾಗಳು ತೆಲುಗು ಚಿತ್ರರಂಗವನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದು, ಅಪಾರ ಮೆಚ್ಚುಗೆಯನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿವೆ.

ಸದ್ಯ ಪ್ಯಾನ್ ಇಂಡಿಯಾ ಚಲನಚಿತ್ರಗಳ ಸಂಖ್ಯೆ ಹೆಚ್ಚಾಗಿದ್ದು, ವಿಶ್ವದಾದ್ಯಂತ ಸಿನಿಪ್ರೇಕ್ಷಕರಲ್ಲಿ ಭಾರಿ ಹೈಪ್ ಮತ್ತು ನಿರೀಕ್ಷೆಯನ್ನು ಮೂಡಿಸಿದೆ. ಇದೀಗ ಬಿಡುಗಡೆಯತ್ತ ಎದುರುನೋಡುತ್ತಿರುವ ಮೂರು ಬಿಗ್ ಪ್ಯಾನ್-ವರ್ಲ್ಡ್​ ಸಿನಿಮಾಗಳತ್ತ ಪ್ರೇಕ್ಷಕರ ಚಿತ್ತ ಮೂಡಿದೆ. ಮಹೇಶ್ ಬಾಬು ನಟನೆಯ 'SSMB 29', ಅಲ್ಲು ಅರ್ಜುನ್ ಅಭಿನಯದ 'ಪುಷ್ಪ 2' ಮತ್ತು ಪ್ರಭಾಸ್ ಅವರ 'ಕಲ್ಕಿ 2898 ಎಡಿ' ಚಿತ್ರಗಳ ಬಜೆಟ್ ವಿವರ ಹೀಗಿದೆ.

ನಿರ್ದೇಶಕ ಎಸ್. ಎಸ್. ರಾಜಮೌಳಿ ನಿರ್ದೇಶಿಸಲಿರುವ ಮಹೇಶ್ ಬಾಬು ನಟನೆಯ ಚಿತ್ರಕ್ಕೆ ತಾತ್ಕಾಲಿಕವಾಗಿ 'SSMB29' ಎಂದು ಟೈಟಲ್ ಇಡಲಾಗಿದ್ದು, ಈ ಸಿನಿಮಾಗೆ ಬರೋಬ್ಬರಿ 1000 ಕೋಟಿ ರೂ. ಬಜೆಟ್ ಮೀಸಲು ಎಂದು ವರದಿ ಉಲ್ಲೇಖಿಸಿದೆ. ಇಂಡೋನೇಷ್ಯಾದ ನಟಿ ಚೆಲ್ಸಿಯಾ ಎಲಿಜಬೆತ್ ಮಹೇಶ್ ಬಾಬುಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ವದಂತಿಗಳಿವೆ. ಈ ಚಿತ್ರವು ಜೂನ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದು, ಕೆ.ಎಲ್. ನಾರಾಯಣ ನಿರ್ಮಿಸಲಿದ್ದಾರೆ ಎನ್ನಲಾಗಿದೆ.

ಅಲ್ಲು ಅರ್ಜುನ್ ನಟನೆಯ ಬಹುನಿರೀಕ್ಷಿತ 'ಪುಷ್ಪ 2' ಚಿತ್ರವನ್ನು ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೂ ಕೂಡ 1000 ಕೋಟಿ ರೂ. ಬಜೆಟ್ ಮೀಸಲು ಎಂದು ಹೇಳಲಾಗಿದೆ. ಈಗಾಗಲೇ ಸೋಷಿಯಲ್ ಮೀಡಿಯಾ ಸೇರಿದಂತೆ ಹಲವೆಡೆ ಸಾಕಷ್ಟು ಹೈಪ್ ಹುಟ್ಟುಹಾಕಿರುವ ಐಕಾನ್​ ಸ್ಟಾರ್​ ಚಿತ್ರದ ಚಿತ್ರೀಕರಣವು ಸದ್ಯ ಭರದಿಂದ ಸಾಗುತ್ತಿದೆ.

ಪ್ರಭಾಸ್ ಅಭಿನಯದ ಸೈನ್ಸ್​-ಫಿಕ್ಷನ್​ ಆಧರಿತ 'ಕಲ್ಕಿ 2898 ಎಡಿ' ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದು, ಈ ಚಿತ್ರಕ್ಕೆ 600 ಕೋಟಿ ರೂ. ಬಜೆಟ್ ಬಳಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಂತಾದವರ ತಾರಾಗಣವಿದೆ. ಈಗಾಗಲೇ ತಿಳಿಸಿರುವಂತೆ ಚಿತ್ರವು ಮೇ 9, 2024 ರಂದು ಬಿಡುಗಡೆಯಾಗಲಿದೆ,(ಏಜೆನ್ಸೀಸ್).