ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಹಣ ನೀಡದೆ ನಿರ್ಲಕ್ಷ:ಸಚಿವ ಎನ್ ಚಲುವರಾಯಸ್ವಾಮಿ

ಬರಗಾಲಕ್ಕೆ ಕೇಂದ್ರ ಸರ್ಕಾರ ಪರಿಹಾರ ಹಣ ನೀಡದೆ ನಿರ್ಲಕ್ಷ:ಸಚಿವ ಎನ್ ಚಲುವರಾಯಸ್ವಾಮಿ
Published on

ಹಾಸನ: ರಾಜ್ಯದಲ್ಲಿ ಸಂಪೂರ್ಣ ಬರಗಾಲದಿಂದ ಜನರು ಸಂಕಷ್ಟದಲ್ಲಿದ್ದಾರೆ.ಆದರೆ ಕೇಂದ್ರ ಸರ್ಕಾರ ಪರಿಹಾರ ಹಣ ನೀಡದೆ ನಿರ್ಲಕ್ಷ ವಹಿಸಿದ್ದು, ಇಷ್ಟು ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿರುವ ಯಾವ ಸರ್ಕಾರವೂ ಕೂಡ ಹೀಗೆ ತಾರತಮ್ಯ ನೀತಿ ಅನುಸರಿಸಿಲ್ಲ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತೆರಿಗೆ ಸಂಗ್ರಹದಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೆ ನಮಗೆ ಬರಬೇಕಾಗಿರುವಂತಹ ಎನ್‌ಡಿಆರ್‌ಎಫ್ ಅನುದಾನವನ್ನ ಇದುವರೆಗೂ ಕೂಡ ಬಿಡುಗಡೆ ಮಾಡಿಲ್ಲ, ಅಲ್ಲದೆ ರಾಜ್ಯದಿಂದ ಬಿಜೆಪಿಯ 26 ಸಂಸದರು ಆಯ್ಕೆಯಾಗಿದ್ದು ಅವರು ಕೂಡ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿಲ್ಲ ಎಂದು ದೂರಿದರು.
ರಾಜ್ಯದ ಸರ್ಕಾರ 5 ಗ್ಯಾರಂಟಿ ಯೋಜನೆಗಳ ಮೂಲಕ ಎಲ್ಲಾ ಜನ ಸಾಮಾನ್ಯರ ಮನೆಗಳಿಗೆ ಮಾಸಿಕ ಕನಿಷ್ಠ 5000 ರೂ ಆರ್ಥಿಕ ಅನುಕೂಲ ತಲುಪಿಸುವ ಕೆಲಸ ಮಾಡುತ್ತಿದೆ .ಇದಕ್ಕಾಗಿ 56,000 ಕೋಟಿ ರೂ ತೆಗೆದಿಡಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಕೇವಲ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮಾಡಲಾಗಾಗಿದೆ. ಮಂದೆಯೂ ನಮ್ಮ ಸರ್ಕಾರ ಜನಸಾಮಾನ್ಯರ ಶ್ರೇಯೋಭಿವೃದ್ದಿಗೆ ಶ್ರಮಿಸಲಿದೆ ಎಂದು ಹೇಳಿದರು
ರಾಜ್ಯ ಸರ್ಕಾರ ಕೃಷಿಗೆ ಹೆಚ್ಚಿನ ಆದ್ಯತೆ ನೀಡಿದೆ .ಈ ವರ್ಷ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ತರಲಾಗುವುದು.ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂಪಾಯಿ ಮೀಸಲು ಇಡಲಾಗಿದೆ.ಆಹಾರ ಪಾರ್ಕ್‌ಗಳ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯದ ಕೃಷಿಕರನ್ನು ಸಧೃಡಗೊಳಿಸುವ ಜೊತೆಗೆ ಕೃಷಿ ಕ್ಷೇತ್ರಕ್ಕೆ ವಿಶೇಷ ಮನ್ನಣೆ ಒದಗಿಸುವುದು ಸರ್ಕಾರದ ಆಶಯ. ಅದಕ್ಕಾಗಿ ಈ ಬಾರಿ ಸಮಗ್ರ ಬೇಸಾಯ ಸೇರಿದಂತೆ ಹತ್ತಾರು ಹೊಸ ಯೋಜನೆ ರೂಪಿಸಿ ಜಾರಿಗೆ ತರಲಾಗುತ್ತದೆ ಎಂದರು.
ಸಂಶೋಧನೆಗಳ ಜೊತೆಗೆ,ತಂತ್ರಜ್ಞಾನ ಯಾಂತ್ರೀಕರಣದ ಲಾಭವನ್ನು ರೈತರಿಗೆ ತಲುಪಿಸಬೇಕು ಆ ಮೂಲಕ ಕೃಷಿಕರನ್ನು ಸಭಲರನ್ನಾಗಿಸಬೇಕು ಎಂಬುದು ನಮ್ಮ ಚಿಂತನೆಯಾಗಿದೆ.ಅಲ್ಲದೇ ಸಮುದಾಯ ಬೀಜ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು.ಮತ್ತು ನಮ್ಮ ಮಿಲೆಟ್ -ಸಿರಿಧಾನ್ಯ ಪ್ರೋತ್ಸಾಹ ಮಾಡಲು ಸರ್ಕಾರದಿಂದ ಯೋಜನೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net