ನ್ಯೂಸ್

ಈ ರೀತಿ ಆದ್ರೆ ಮುಂದೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಂಬಳ ಜತೆಗೆ ಸಾಲ ಕೂಡ ಮಾಡಬೇಕಾಗುತ್ತದೆ! ಈ ಸುದ್ದಿ ಓದಿ..

ಮೋಹನ್​ ಶೆಟ್ಟಿ

ಬೆಂಗಳೂರು: ಪ್ರತಿ ಪೋಷಕರಿಗೂ ತಮ್ಮ ಮಕ್ಕಳು ಒಳ್ಳೆಯ, ಹೆಸರಾಂತ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಬೇಕು. ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಬೇಕು, ಸಾಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದು ದೊಡ್ಡ ಆಸೆಯನ್ನು ಹೊತ್ತು ಶಾಲೆಗಳಿಗೆ ಸೇರಿಸುತ್ತಾರೆ. ತಾವು ನೆಲೆಸಿರುವ ನಗರದಲ್ಲಿ ಯಾವ ಶಿಕ್ಷಣ ಸಂಸ್ಥೆ ಉತ್ತಮವಾಗಿದೆ ಎಂದು ಅನೇಕರ ಬಳಿ ಕೇಳಿ, ಪರಿಶೀಲಿಸಿ ತದನಂತರ ದಾಖಲಿಸುತ್ತಾರೆ. ಆದ್ರೆ, ಆಯಾ ಶಾಲಾ ಆಡಳಿತ ಮಂಡಳಿಗಳು ಈ ರೀತಿ ಮಾಡಿದ್ರೆ ಯಾವ ಪೋಷಕರಿಗೂ ತಮ್ಮ ಮಕ್ಕಳು ವಿದ್ಯಾಭ್ಯಾಸ ಪಡೆಯುವುದು ಬೇಡವೇ ಬೇಡ ಅನಿಸೋದು ಖಚಿತ.

ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಡುವ ಪೋಷಕರು, ಅವರಿಗಾಗಿ ದಿನನಿತ್ಯ ಶ್ರಮ ಮೀರಿ ದುಡಿದು ತಿಂಗಳಾಂತ್ಯದಲ್ಲಿ ಬರುವ ಸಂಬಳದಲ್ಲಿ ಅವರ ಎಜುಕೇಷನ್​ಗೆ ಬೇಕಾದ ಅಗತ್ಯ ಹಣವನ್ನು ಸಂಗ್ರಹಿಸಿಡುವುದರ ಜತೆಗೆ ಶುಲ್ಕವಾಗಿ ಕೂಡ ಕಟ್ಟುತ್ತಾರೆ. ಆದ್ರೆ, ತಂದೆ-ತಾಯಿಯರ ಖರ್ಚು ಇಲ್ಲಿಗೆ ಮುಗಿಯಿತು ಅಂದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ!

ಯಾಕಂದ್ರೆ, ಕೇವಲ ವರ್ಷದ ಫೀಸ್​ನಲ್ಲಿ ಎಲ್ಲಾ ಮುಗಿದು ಹೋಗಿದಿದ್ದರೇ ಯಾವ ಪೋಷಕರು ಹೆಚ್ಚು ಚಿಂತಿಸುತ್ತಿರಲಿಲ್ಲ. ಆದ್ರೆ, ಪಠ್ಯ-ಪುಸ್ತಕ ಸೇರಿದಂತೆ ಓದಿಗೆ ಬೇಕಾದ ಸಾಮಾಗ್ರಿಗಳನ್ನು ಕೂಡ ಕೊಡಿಸಬೇಕು. ಅದು ವರ್ಷ ಪೂರ್ತಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ. ಆದ್ರೆ, ವರ್ಷಗಳು ಉರುಳಿದಂತೆ ಶಾಲೆಗಳು ಅಭಿವೃದ್ಧಿಯಾಗುತ್ತಿದ್ದಂತೆ ಶಾಲಾ ಶುಲ್ಕಗಳು ಕೂಡ ಹೆಚ್ಚುತ್ತಿವೆ.

10ನೇ ತರಗತಿಗೆ ಕಟ್ಟಬೇಕಾದ ಶುಲ್ಕ ಈಗ ನರ್ಸರಿ ಮತ್ತು ಎಲ್​ಕೆಜಿಗೆ ಪಾವತಿ ಮಾಡುವಂತ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಇಂದಿನ ಶುಲ್ಕ ರಚನೆಗಳ ವಿವರಗಳನ್ನು ನೋಡುವ ಪೋಷಕರು ಒಂದು ನಿಮಿಷ ಕಂಗಾಲಾಗುತ್ತಿದ್ದಾರೆ. ಇದಕ್ಕೆ ಉದಾಹರಣೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನರ್ಸರಿ ತರಗತಿಯ ಶುಲ್ಕ ರಚನೆ ಪಟ್ಟಿ! ಹೌದು, ಇದರಲ್ಲಿ ಒಂದು ಬಾರಿ ಪಾವತಿ ಮಾಡುವ ಅಡ್ಮಿಶನ್​ ಫೀಸ್​ನಿಂದ ಹಿಡಿದು ಶಿಕ್ಷಕರು ಮತ್ತು ಪೋಷಕರ ಓರಿಯಟೆಂಷನ್​ ಫೀಸ್​ ವಿವರ ನೋಡಿದ್ರೆ ಯಾರಾದರೂ ಬೆಚ್ಚಿ ಬೀಳುವುದು ಖಚಿತ.

ಈ ಫೋಟೋ ಪ್ರಕಾರ, ಕೇವಲ ನರ್ಸರಿ ದಾಖಲಾತಿಗೆ ಬರೋಬ್ಬರಿ 1,51,656 ರೂ. ಮೊತ್ತ ನಿಗದಿಯಾಗಿದೆ. ಇದು ಒಟ್ಟು ಫೀಸ್​ ಆದರೆ, ಇದರ ಜತೆಗೆ ಪೋಷಕರ ಓರಿಯಟೆಂಷನ್​ ಫೀಸ್​ ಎಂದು ಪ್ರತ್ಯೇಕವಾಗಿ 8,400 ರೂ. ಸ್ವೀಕರಿಸುತ್ತಾರೆ. ಇದನ್ನು ಅಡ್ಮಿಷನ್​ ಸಮಯದಲ್ಲಿ ಪಡೆಯಲಾಗುವುದು ಎಂದು ಉಲ್ಲೇಖಿಸಿದ್ದಾರೆ. ಈ ವಿಷಯ ಅನೇಕರನ್ನು ಗಾಬರಿಗೊಳಿಸಿದ್ದು, ಹೀಗೆ ಆದ್ರೆ, ಎಲ್ಲಿಂದ ಹಣ ತರುವುದು? ಸಂಬಳದ ಜತೆಗೆ ಸಾಲ ಕೂಡ ಮಾಡಬೇಕಾಗುತ್ತದೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ.