More

    ಧಾರ್ಮಿಕ ಭಾವನೆ ಕೆರಳಿಸುವುದನ್ನು ಬಿಜೆಪಿ ಬಿಡಲಿ

    ಕೋಲಾರ: ಮಂದಿರ, ಮಸೀದಿ ಹೆಸರಲ್ಲಿ ಧಾರ್ಮಿಕ ಭಾವನೆಗಳ್ನು ಕೆರಳಿಸುವುದನ್ನು ಬಿಜೆಪಿ ಬಿಡಬೇಕು. ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಾಗಿನಿಂದ ಸರ್ಕಾರ ಬೀಳುತ್ತದೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಅವರು ಹೇಳುವುದೆಲ್ಲ ಅಪ್ಪಟ ಸುಳ್ಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್​ ಬಿಜೆಪಿಗೆ ತಿರುಗೇಟು ನೀಡಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮ ಎಲ್ಲರಿಗೂ ದೇವರು. ನಮ್ಮ ಮನೆಯ ದೇವರು ರಾಮೇಶ್ವರ ಸ್ವಾಮಿ. ರಾಜಕೀಯಕ್ಕಾಗಿ ದೇವರ ಬಳಕೆ ಮಾಡುವುದು ಸರಿಯಲ್ಲ, ಇದಕ್ಕೆಲ್ಲ ಜನರೇ ಉತ್ತರ ನೀಡುತ್ತಾರೆ ಎಂದರು.
    ಶೆಟ್ಟರ್​ಗೆ ಅನ್ಯಾಯ ಮಾಡಿಲ್ಲ:
    ಜಗದೀಶ್​ ಶೆಟ್ಟರ್​ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇದರಿಂದಾಗಿ ಕಾಂಗ್ರೆಸ್​ ಪಕ್ಷಕ್ಕೆ ಲಾಭ, ನಷ್ಟವೇನೂ ಇಲ್ಲ. ಚುನಾವಣೆಯಲ್ಲಿ ಸೋತರು ಎಂಎಲ್ಸಿ ಸ್ಥಾನ ಕೊಟ್ಟು ಗೌರವಯುತವಾಗಿ ನಡೆಸಿಕೊಂಡಿದೆ. ಯಾವುದೇ ರೀತಿ ಅನ್ಯಾಯ ಮಾಡಿಲ್ಲ. ಬಿಜೆಪಿಗೆ ವಾಪಸ್​ ಯಾಕೆ ಹೋದರು ಎಂಬುದು ಗೊತ್ತಿಲ್ಲ. ವಾಪಸ್​ ಹೋದವರ ಬಗ್ಗೆ ಚರ್ಚೆ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಎದುರಾಗುವ ಪರಿಣಾಮದಿಂದ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಬೈರತಿ ಸುರೇಶ್​ ಹೇಳಿದರು.
    ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್​ ಜತೆ ಜೆಡಿಎಸ್​ ಮೈತ್ರಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಲಾಭ ಆಯಿತು. ಈಗ ಬಿಜೆಪಿ&ಜೆಡಿಎಸ್​ ಮೈತ್ರಿಯಿಂದ ಕಾಂಗ್ರೆಸ್​ಗೆ ಲಾಭವಾಗುತ್ತದೆ. ಅವರು ಎಷ್ಟೇ ಪ್ರಯತ್ನ ಮಾಡಿದರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್​ 15ರಿಂದ 20 ಸ್ಥಾನ ಗೆಲ್ಲುವುದು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು. ರಾಮಲಲ್ಲಾ ಪ್ರತಿಷ್ಠಾಪನೆ ನಂತರ ರಾಜ್ಯದಲ್ಲಿ ಕಾಂಗ್ರೆಸ್​ ಧೂಳಿಪಟವಾಗುತ್ತದೆ ಅನ್ನೋದು ಸುಳ್ಳು. ಲೋಕಸಭಾ ಚುನಾವಣೆಯಲ್ಲಿ ಕೋಲಾರದಲ್ಲೂ ಕಾಂಗ್ರೇಸ್​ ಕೀರ್ತಿ ಪತಾಕೆಯನ್ನು ಹಾರಿಸುತ್ತೇವೆ ಎಂದರು.
    ಅಭಿವೃದ್ಧಿ ಕಾರ್ಯಕ್ರಮಗಳಿಗೆ ಯಾವುದೇ ರೀತಿ ಅನುದಾನ ಕೊರತೆ ಎದುರಾಗದಂತೆ ಬಿಡುಗಡೆ ಮಾಡಿಸಲಾಗುವುದು. ಮುಂದಿನ ದಿನಗಳಲ್ಲಿ ಬಜೆಟ್​ ಅಧಿವೇಶನ ನಡೆಯಲಿದ್ದು, ಜಿಲ್ಲೆಯ ಪರವಾಗಿ ಕೋಲಾರಕ್ಕೆ ಮೆಡಿಕಲ್​ ಕಾಲೇಜು, ರಿಂಗ್​ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾವನೆ ಸಲ್ಲಿಸಿದ್ದು, ಮಂಜೂರು ಮಾಡುವುದಾಗಿ ಒಪ್ಪಿಗೆ ನೀಡಿದ್ದಾರೆ. ಮಾವು ಸಂಸ್ಕರಣ ಟಕ ಸ್ಥಾಪನೆಗೂ ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.
    ಖಾಸಗಿ ವ್ಯಕ್ತಿಗಳ ದೇವಾಲಯಗಳಲ್ಲ
    75ನೇ ಗಣರಾಜ್ಯೋತ್ಸವ ಆಹ್ವಾನ ಪತ್ರಿಕೆಯಲ್ಲಿ ಗೋಲ್​ ಗುಂಬಾಜ್​, ಚಾರ್​ಮಿನಾರ್​ ಮುದ್ರಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಬೈರತಿ ಸುರೇಶ್​, ಎರಡು ಮುಜರಾಯಿ ಇಲಾಖೆಯದ್ದೇ ಹಾಗೂ ಸರ್ಕಾರದ್ದೇ. ಅವು ಖಾಸಗಿ ವ್ಯಕ್ತಿಗಳದ್ದಲ್ಲ. ಇದು ಸಣ್ಣ ವಿಚಾರ ಅಷ್ಟೇ ವಿವಾದ ಸೃಷ್ಟಿಸುವ ಅಗತ್ಯವಿಲ್ಲ. ಮುಂದಿನ ಗಣರಾಜ್ಯೋತ್ಸವಕ್ಕೆ ಸ್ಥಳಿಯ ಪ್ರವಾಸಿ ತಾಣಗಳ ಚಿತ್ರಗಳನ್ನು ಮುದ್ರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts