ನ್ಯೂಸ್

ವಯನಾಡು ಭೂದುರಂತ: CSIR-NIIST ವತಿಯಿಂದ ತಯಾರಾಗ್ತಿದೆ ದೀರ್ಘಾವಧಿಯ ಆಹಾರ! 1000 ಪ್ಯಾಕೆಟಿಗೆ 70 ಜನರ ಶ್ರಮ

ವಯನಾಡು: ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದ ವಯನಾಡಿನಲ್ಲಿ ಮಂಗಳವಾರ (ಜುಲೈ 30) ಭಾರಿ ಮಳೆಗೆ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರತ್ತಲೇ ಇದೆ. ಇದೀಗ ಸಾವಿಗೀಡಾದವರ ಸಂಖ್ಯೆ 308ಕ್ಕೆ ಏರಿಕೆಯಾಗಿದ್ದು, ಮಣ್ಣಿನಡಿ ಹಾಗೂ ಅವಶೇಷಗಳಡಿ ಸಿಲುಕಿರುವ ಮೃತದೇಹ ಹೊರತೆಗೆಯುವುದು ಹರಸಾಹಸವಾಗಿದೆ. ಸದ್ಯ ರಕ್ಷಣಾ ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸದೆ ಮುಂದುವರೆಸಿರುವ ಭಾರತೀಯ ಸೇನೆ ಬದುಕುಳಿದಿರುವವರ ಪತ್ತೆಗಾಗಿ ನಿರಂತರವಾಗಿ ಶ್ರಮಿಸುತ್ತಿದೆ.

ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಕೋಸ್ಟ್ ಗಾರ್ಡ್ ಮತ್ತು ಭಾರತೀಯ ನೌಕಾಪಡೆಯನ್ನು ಒಳಗೊಂಡ ಜಂಟಿ ತಂಡವು ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಶೋಧ ಕಾರ್ಯವನ್ನು ಕೈಗೊಂಡಿದೆ. ಪ್ರತಿ ರಕ್ಷಣಾ ತಂಡವೂ ಮೂವರು ಸ್ಥಳೀಯರು ಹಾಗೂ ಒಬ್ಬರು ಅರಣ್ಯ ಇಲಾಖೆ ನೌಕರನನ್ನೂ ತಂಡದಲ್ಲಿ ಒಳಗೊಂಡಿದೆ. ಸದ್ಯ ಇದೆಲ್ಲದರ ನಡುವೆ ಭೂದುರಂತದಲ್ಲಿ ಬದುಕುಳಿದ 1000ಕ್ಕೂ ಅಧಿಕ ಸಂತ್ರಸ್ತರನ್ನು ಇದೀಗ ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದ್ದು, ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ.

ಸರ್ಕಾರ ಮತ್ತು ಸ್ವಯಂಸೇವಕರು ವಯನಾಡು ಭೂಕುಸಿತದಿಂದ ತಮ್ಮವರನ್ನು ಕಳೆದುಕೊಂಡವರಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಬೇಕಾದ ಸಹಾಯವನ್ನು ಮಾಡಲು ಮುಂದಾಗಿದ್ದು, ಸಂತ್ರಸ್ತರಿಗೆ ಆಹಾರ ಪೂರೈಕೆಯ ಅಗತ್ಯವು ಹೆಚ್ಚಾಗಿದೆ. ಈ ಪರಿಸ್ಥಿತಿಯಲ್ಲಿ ತಂತ್ರಜ್ಞಾನ ದೊಡ್ಡ ಪಾತ್ರ ವಹಿಸಿದ್ದು, ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಹಾಗೂ ತಿರುವನಂತಪುರಂನಲ್ಲಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್ ಡಿಸಿಪ್ಲಿನರಿ ಸೈನ್ಸ್ ಅಂಡ್ ಟೆಕ್ನಾಲಜಿ ಬದುಕುಳಿದವರಿಗೆ ಆಹಾರ ಪದಾರ್ಥಗಳನ್ನು ತಯಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ.

NIIST ತಂಡವು ತಂತ್ರಜ್ಞಾನವನ್ನು ಬಳಸಿಕೊಂಡು ಸಂತ್ರಸ್ತರಿಗೆ ದೀರ್ಘಾವಧಿಯ ಆಹಾರವನ್ನು ಪೂರೈಕೆ ಮಾಡಲು ಎದುರುನೋಡುತ್ತಿದ್ದು, ಪ್ರತಿ ಆಹಾರ ಪದಾರ್ಥದ 1000 ಪ್ಯಾಕೆಟ್‌ಗಳನ್ನು ತಯಾರಿಸಲು 70ಕ್ಕೂ ಹೆಚ್ಚು ಜನರು ಕೈಜೋಡಿಸಿದ್ದಾರೆ,(ಏಜೆನ್ಸೀಸ್).