ಚಿತ್ರದುರ್ಗ: ಸ್ವಾತಂತ್ರ್ಯ ದಿನವನ್ನು ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಆ.15ರ ಬೆಳಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು ಎಂದರು. ಸಂಬಂಧಿಸಿದ ಅಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಪಥ ಸಂಚಲನಕ್ಕೆ ಪೊಲೀಸ್, ಅರಣ್ಯ, ಅಬಕಾರಿ ಇಲಾಖೆ ಅಧಿಕಾರಿ, ಸಿಬ್ಬಂದಿ, ಹೋಂಗಾರ್ಡ್, ಎನ್‌ಸಿಸಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳು ಸೇರಿ ಉತ್ತಮ ತುಕಡಿಗಳನ್ನು ಸಜ್ಜುಗೊಳಿಸಬೇಕೆಂದು ಹೇಳಿದರು. ರಾಷ್ಟ್ರಧ್ವಜಾರೋಹಣದ ನಂತರ ಶಾಲಾ ಮಕ್ಕಳಿಂದ ಬೆಳಗ್ಗೆ ಹಾಗೂ ತರಾಸು ರಂಗಮಂದಿರದಲ್ಲಿ ಸಂಜೆ ಸಾಂಸ್ಕೃತಿಕ ಕಾರ‌್ಯಕ್ರಮ ನಡೆಯಲಿವೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಎಲ್ಲ ಸರ್ಕಾರಿ ಕಟ್ಟಡ, ಪ್ರಮುಖ ವೃತ್ತಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಬೇಕು. ಸ್ವಾತಂತ್ರೊೃೀತ್ಸವದಲ್ಲಿ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ಭಾಗವಹಿಸಬೇಕೆಂದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ರಾಷ್ಟ್ರಧ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನಿರಿಸಿ ಗೌರವ ಸಮರ್ಪಿಸಬೇಕು. ಆ.15ರಂದು ಸಂಗೊಳ್ಳಿ ರಾಯಣ್ಣ ಅವರ ಜಯಂತಿ ಕೂಡ ಇದ್ದು, ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಗುವುದು. ಅಂದು ರಾಯಣ್ಣ ವೃತ್ತದಲ್ಲಿ ವಿಶೇಷ ಅಲಂಕಾರ ಕೈಗೊಳ್ಳಬೇಕೆಂದು ಸೂಚಿಸಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಎಸಿ ಎಂ.ಕಾರ್ತಿಕ್, ನಗರಸಭೆ ಆಯುಕ್ತೆ ಎಂ.ರೇಣುಕಾ ಮತ್ತಿತರ ಅಧಿಕಾರಿಗಳಿದ್ದರು.