ನ್ಯೂಸ್

ಆಂಧ್ರಪ್ರದೇಶ ಚುನಾವಣೆ: ಟಿಡಿಪಿಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆ!

ವಿಜಯವಾಡ: ರಾಜ್ಯದಲ್ಲಿ ಆಡಳಿತರೂಢ ವೈಸಿಪಿಯನ್ನು ಕಿತ್ತೊಗೆಯುವ ಉದ್ದೇಶದಿಂದ ಟಿಡಿಪಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ತನ್ನ ಕೊನೆಯ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾ ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಇತ್ತೀಚೆಗೆ ಟಿಡಿಪಿಗೆ ಸೇರ್ಪಡೆಯಾದ ವೈಎಸ್ಆರ್​ ಕಾಂಗ್ರೆಸ್​ ಪಕ್ಷದ ಮಾಜಿ ಸಂಸದರಿಗೆ ಟಿಕೆಟ್​ ನೀಡಿಲಾಗಿದೆ.

ಇತ್ತೀಚೆಗಷ್ಟೇ ಆಡಳಿತಾರೂಢ ವೈಎಸ್‌ಆರ್‌ಸಿಪಿಯಿಂದ ಹೊರಬಂದ ಎಂ ಶ್ರೀನಿವಾಸುಲು ರೆಡ್ಡಿಯನ್ನು ಒಂಗೋಲ್‌ನಿಂದ ಟಿಡಿಪಿ ಕಣಕ್ಕಿಳಿಸಿದೆ. ಅವರು 2019 ರಲ್ಲಿ ವೈಎಸ್‌ಆರ್‌ ಪಕ್ಷದ ಅಭ್ಯರ್ಥಿಯಾಗಿ ಅದೇ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.

ವಿಜಯನಗರದಿಂದ ಕೆ ಅಪ್ಪಲನಾಯ್ಡು, ಅನಂತಪುರದಿಂದ ಎ ಲಕ್ಷ್ಮೀನಾರಾಯಣ ಮತ್ತು ಕಡಪದಿಂದ ಸಿ ಭೂಪೇಶ್ ರೆಡ್ಡಿ ಅವರಿಗೆ ಟಿಕೆಟ್​ ನೀಡಲಾಗಿದೆ.

ನಾಲ್ಕು ಹೆಸರುಗಳ ಘೋಷಣೆಯೊಂದಿಗೆ, ಟಿಡಿಪಿ 17 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ, ಅದನ್ನು ರಾಜ್ಯದಲ್ಲಿ ಎನ್ಡಿಎ ಭಾಗವಾಗಿ ಹಂಚಿಕೆ ಮಾಡಲಾಗಿದೆ.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?: ಲೋಕಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ 17 ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ, ಬಿಜೆಪಿ 6ರಲ್ಲಿ ಹಾಗೂ ಪವನ್​ ಕಲ್ಯಾಣ್​ರ ಜನಸೇನಾ ಪಕ್ಷ 2 ರಲ್ಲಿ ಸ್ಪರ್ಧಿಸಲಿದೆ. 175 ವಿಧಾನಸಭಾ ಕ್ಷೇತ್ರಗಳ ಪೈಕಿ 144ರಲ್ಲಿ ಟಿಡಿಪಿ ಸ್ಪರ್ಧಿಸಲಿದೆ.

ಜನಸೇನಾ 21 ಮತ್ತು ಬಿಜೆಪಿ 10ರಲ್ಲಿ ಸ್ಪರ್ಧಿಸಲಿದೆ. ಆದರೆ ಪಕ್ಷಗಳಿಗೆ ಮೀಸಲಾದ ಸ್ಥಾನಗಳ ಹೊರತಾಗಿ ಯಾವ್ಯಾವ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು, ಟಿಕೆಟ್ ನೀಡಿದರೆ ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಈ ಮೂರೂ ಪಕ್ಷಗಳ ಪ್ರಮುಖ ನಾಯಕರು ಮತ್ತೊಮ್ಮೆ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.