ನ್ಯೂಸ್

ಇನ್ನು ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆ; ಸಂಸತ್ತಲ್ಲಿ ಮಹತ್ವದ ಮಸೂದೆ ಅಂಗೀಕಾರ

ನವದೆಹಲಿ: ಇನ್ಮುಂದೆ ಜನನ ಪ್ರಮಾಣಪತ್ರವೇ ಎಲ್ಲದಕ್ಕೂ ದಾಖಲೆಯಾಗಿ ಪರಿಗಣಿಸಬಹುದು. ಆ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಇಂದು ಮಹತ್ವದ ಮಸೂದೆಯೊಂದು ಅಂಗೀಕಾರಗೊಂಡಿದೆ. ಅರ್ಥಾತ್​, ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ ಲೋಕಸಭೆಯಲ್ಲಿ ಅಂಗೀಕೃತಗೊಂಡಿದೆ.

ಈ ತಿದ್ದುಪಡಿಯು ಇನ್ನುಮುಂದೆ ಜನನ ಪ್ರಮಾಣಪತ್ರವನ್ನೇ ಏಕೈಕ ದಾಖಲೆಯಾಗಿ ಪರಿಗಣಿಸುವಲ್ಲಿ ನೆರವಾಗಲಿದೆ. ಅಂದರೆ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಚಾಲನ ಪರವಾನಗಿ, ಮತದಾರರ ಗುರುತಿನ ಚೀಟಿ, ಆಧಾರ್ ನಂಬರ್​, ಮದುವೆ ನೋಂದಣಿ ಮಾತ್ರವಲ್ಲ ಸರ್ಕಾರಿ ಉದ್ಯೋಗದ ನೇಮಕಾತಿ ಎಲ್ಲದಕ್ಕೂ ಜನನ ಪ್ರಮಾಣಪತ್ರವೇ ದಾಖಲೆಯನ್ನಾಗಿ ನೀಡಬಹುದು.

ಮಣಿಪುರ ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಎದ್ದ ಗದ್ದಲದ ನಡುವೆಯೂ ಈ ಮಸೂದೆಯನ್ನು ಅಂಗೀಕರಿಸಲಾಯಿತು. ಇದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ, ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ-2023 ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಡೇಟಾಬೇಸ್ ರಚಿಸಲು ಸಹಾಯ ಮಾಡುತ್ತದೆ ಎಂದರು. ಇದು ಅಂತಿಮವಾಗಿ ಸಾರ್ವಜನಿಕ ಸೇವೆಗಳು, ಸಾಮಾಜಿಕ ಪ್ರಯೋಜನಗಳು ಮತ್ತು ಡಿಜಿಟಲ್ ನೋಂದಣಿಯ ಪರಿಣಾಮಕಾರಿ ಮತ್ತು ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ ಎಂದೂ ಹೇಳಿದರು.