ಗುವಾಹಟಿ: ಆಲ್ ಇಂಡಿಯಾ ಜಮಾತ್ ಉಲೇಮಾ ಉಪಾಧ್ಯಕ್ಷ ಹಾಗೂ ಈಶಾನ್ಯ ರಾಜ್ಯಗಳ ಅಮೀರ್-ಎ- ಶರೀಯತ್ ಆಗಿದ್ದ ಖೈರುಲ್ ಇಸ್ಲಾಂ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನರು ಪಾಲ್ಗೊಂಡ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆದ ಸ್ಥಳದ ಸುತ್ತಲಿನ ಮೂರು ಗ್ರಾಮಗಳಿಗೆ ದಿಗ್ಬಂಧನ ವಿಧಿಸಲಾಗಿದೆ.
ಗುವಾಹಟಿಯಲ್ಲಿ ಈಗಾಗಲೇ ಕರ್ಫ್ಯೂ ಜಾರಿಯಲ್ಲಿದೆ. ಜನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಅದರ ನಡುವೆ, ನೌಗಾಂವ್ನಲ್ಲಿ ನಡೆದ 87 ವರ್ಷದ ಧರ್ಮ ಪ್ರಚಾರಕನ ಅಂತ್ಯಕ್ರಿಯೆಯಲ್ಲಿ 10 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ. ಇವರ ಮಗ ಅಮಿನುಲ್ ಇಸ್ಲಾಂ ಸ್ಥಳೀಯ ಶಾಸಕ.
ನಮ್ಮ ತಂದೆ ಸುತ್ತಲಿನ ಪ್ರದೇಶದಲ್ಲಿ ತುಂಬ ಜನಪ್ರಿಯ ವ್ಯಕ್ತಿಯಾಗಿದ್ದರು. ತಂದೆಯ ಸಾವಿನ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಮುನ್ನೆಚ್ಚರಿಕೆ ಕೈಗೊಂಡು, ಹಲವು ವಾಹನಗಳನ್ನು ಮಾರ್ಗ ಮಧ್ಯದಲ್ಲಿಯೇ ಹಿಂದಕ್ಕೆ ಕಳುಹಿಸಿದರೂ ಸಾವಿರಾರು ಜನರು ಬಂದಿದ್ದರು ಎಂದು ಶಾಸಕ ಅಮಿನುಲ್ ಹೇಳಿದ್ದಾರೆ.
ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಒಂದು ಪ್ರಕರಣ ದಾಖಲಿಸಿಕೊಂಡಿದ್ದರೆ, ಸ್ಥಳದಲ್ಲಿದ್ದ ದಂಡಾಧಿಕಾರಿಗಳು ಇನ್ನೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ತೊಂದರೆಯಾಗಿಲ್ಲ ಆದರೆ, ಲಾಕ್ಡೌನ್ ನಿಯಮ ಉಲ್ಲಂಘಿಸಿರುವುದು, ವ್ಯಕ್ತಿಗತ ಅಂತರ ಪಾಲಿಸದಿರುವುದು, ಮಾಸ್ಕ್ ಧರಿಸದಿರುವುದು ಮೊದಲಾದ ಕಾರಣಗಳಿಗಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಅಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಒಂದೆಡೆ ಸೇರಿದ್ದು, ಕರೊನಾ ಸೂಪರ್ಸ್ಪ್ರೆಡ್ಡರ್ ಆಗುವ ಭೀತಿ ಅಧಿಕಾರಿಗಳದ್ದಾಗಿದೆ.