Delhi: ದೆಹಲಿಯಲ್ಲಿ ನಾನು ಆರಾಮಾಗಿದ್ದು, ಕುಟುಂಬದ ಹಿಂಸಾತ್ಮಕ ಇತಿಹಾಸವನ್ನು ಗಮನದಲ್ಲಿಟ್ಟುಕೊಂಡು ಜಾಗರೂಕರಾಗಿದ್ದೇನೆ, ಸದ್ಯಕ್ಕೆ ಭಾರತವನ್ನು ತೊರೆಯುವ ಯಾವುದೇ ಆಲೋಚನೆ ಎಲ್ಲ ಎಂದು ಬಾಂಗ್ಲಾದೇಶದಿಂದ ಪದಚ್ಯುತಗೊಂಡಿರುವ ಶೇಖ್ ಹಸೀನಾ (Sheikh Hasina) ಹೇಳಿದ್ದಾರೆ.
ಅಮೆರಿಕಾ ಮೂಲದ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಹಸೀನಾ, ಮುಂಬರುವ ಬಾಂಗ್ಲಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ಅವಾಮಿ ಲೀಗ್‌ಗೆ ಸ್ಪರ್ಧಿಸಲು ಅವಕಾಶ ನೀಡದಿದ್ದರೆ ಲಕ್ಷಾಂತರ ಮತದಾರರು ಮತದಾನ ಪ್ರಕ್ರಿಯೆಯನ್ನೆ ಬಹಿಷ್ಕರಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದು, 2024ರ ಜುಲೈ-ಆಗಸ್ಟ್‌ನಲ್ಲಿ ನಡೆದ ಆಂದೋಲನದ ಸಮಯದಲ್ಲಿನ ಹತ್ಯೆಗಳಿಗೆ ಕ್ಷಮೆಯಾಚಿಸಲು ಹಸೀನಾ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಕಾನೂನುಬದ್ಧವಾಗಿರುವ ಸರ್ಕಾರ ರಚನೆಯಾದರೆ, ಅದು ಸಂವಿಧಾನವನ್ನು ಎತ್ತಿಹಿಡಿಯುತ್ತಿದ್ದರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿಜವಾಗಿಯೂ ಗಮನಹಸರಿಸಿದರೆ, ನಾನು ಮರಳಿ ನನ್ನ ದೇಶ ಹೋಗಲು ಇಷ್ಟಪಡುತ್ತೇನೆ ಎಂದರು. ಹಸೀನಾ ಮತ್ತು ಅವರ ಸರ್ಕಾರ ಮತ್ತು ಪಕ್ಷದ ಹಲವಾರು ನಾಯಕರು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದು, ಬಾಂಗ್ಲಾ ರಾಜಧಾನಿ ಢಾಕಾದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ -1 ರಲ್ಲಿ ವಿಚಾರಣೆ ಮುಕ್ತಾಯಗೊಂಡಿದೆ, ಅಲ್ಲಿನ ಸರ್ಕಾರಿ ಅಭಿಯೋಜಕರು ಅವರಿಗೆ ಮರಣದಂಡನೆ ವಿಧಿಸುವಂತೆ ಕೋರಿದರು.
ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ಶೇಖ್ ಹಸೀನಾ ಆಡಳಿತದ ವಿರುದ್ಧದ ಚಳುವಳಿಯಾಗಿ ಬದಲಾದಾಗ ಸುಮಾರು 1,400 ಜನರು ಸಾವನ್ನಪ್ಪಿದ್ದರು ಎಂದು ಆರೋಪಿಸಲಾಗಿದೆ. ಸಂದರ್ಶನದಲ್ಲಿ ಶೇಖ್ ಹಸೀನಾ ಈ ಸಾವುಗಳಿಗೆ ಕ್ಷಮೆಯಾಚಿಸಲು ನಿರಾಕರಿಸಿದರೂ. ಒಂದು ರಾಷ್ಟ್ರವಾಗಿ ನಾವು ಕಳೆದುಕೊಂಡ ಪ್ರತಿಯೊಂದು ಮಗು, ಒಡಹುಟ್ಟಿದವರು, ಸೋದರಸಂಬಂಧಿ ಮತ್ತು ಸ್ನೇಹಿತನಿಗೆ ಶೋಕ ವ್ಯಕ್ತಪಡಿಸುತ್ತೇನೆ ಮತ್ತು ನನ್ನ ಸಂತಾಪ ಸೂಚಿಸುವುದನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.
ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ICT) ವಿಚಾರಣೆಯನ್ನು ಕೊಳಕು ಸಂಪ್ರದಾಯದ ಭಾಗ ಎಂದು ಕರೆದಿರುವ ಹಸೀನಾ, ನನ್ನ ರಾಜಕೀಯ ವಿರೋಧಿಗಳನ್ನು ಒಳಗೊಂಡ ಆಯ್ಕೆಯಾಗದ ಸರ್ಕಾರದಿಂದ ನಡೆಸಲ್ಪಡುವ ಒಂದು ನಕಲಿ ನ್ಯಾಯಾಲಯ. ಆ ವಿರೋಧಿಗಳಲ್ಲಿ ಹಲವರು ನನ್ನನ್ನು ತೊಡೆದುಹಾಕಲು ಏನನ್ನೂ ಮಾಡಲು ಹಿಂಜರಿಯುವುದಿಲ್ಲ, ನಮ್ಮ ದೇಶದ ರಾಜಕೀಯ ಹತ್ಯೆಗಳ ಇತಿಹಾಸದ ಬಗ್ಗೆ ನನಗಿಂತ ಹೆಚ್ಚು ತಿಳಿದಿರುವವರು ಯಾರೂ ಇಲ್ಲ ಎಂದರು.
ಬಾಂಗ್ಲಾದೇಶದ ಸಂಸ್ಥಾಪಕರಲ್ಲಿ ಒಬ್ಬರಾದ ಶೇಖ್ ಹಸೀನಾ ತಂದೆ ಶೇಖ್ ಮುಜಿಬುರ್ ರೆಹಮಾನ್ ಮತ್ತು ಹಲವಾರು ಕುಟುಂಬ ಸದಸ್ಯರನ್ನು ಆಗಸ್ಟ್ 15, 1975 ರಂದು ಸೇನಾ ಅಧಿಕಾರಿಗಳ ಗುಂಪೊಂದು ಹತ್ಯೆ ಮಾಡಿತು. ಇದರಲ್ಲಿ ವಿದೇಶದಲ್ಲಿ ರಜೆಯಲ್ಲಿದ್ದ ಶೇಖ್ ಹಸೀನಾ ಮತ್ತು ಅವರ ಸಹೋದರಿ ಶೇಖ್ ರಿಹಾನ್ನಾ ಸಿದ್ದಿಕ್ ಬದುಕುಳಿದರು. ನಂತರ ಸಹೋದರಿಯರು ದೆಹಲಿಯಲ್ಲಿ ಆಶ್ರಯ ಪಡೆದಿದ್ದರು.
ಬಾಂಗ್ಲಾದೇಶದ ಚುನಾವಣಾ ಆಯೋಗವು ಮೇ ತಿಂಗಳಲ್ಲಿ ಹಸೀನಾರ ಪಕ್ಷವಾದ ಅವಾಮಿ ಲೀಗ್‌ನ ನೋಂದಣಿಯನ್ನು ಸ್ಥಗಿತಗೊಳಿಸಿತು. ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಅವಾಮಿ ಲೀಗ್‌ನ ಚಟುವಟಿಕೆಗಳನ್ನು ನಿಷೇಧಿಸಿತು. ಡಿಸೆಂಬರ್ ಮೊದಲ ವಾರದಲ್ಲಿ ಆಯೋಗವು ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಢಾಕಾ ಮೂಲದ ಡೈಲಿ ಸ್ಟಾರ್ ವರದಿ ಮಾಡಿದೆ.(ಏಜೆನ್ಸೀಸ್)