ನವದೆಹಲಿ: ಕರೊನಾ ವೈರಸ್ ಹುಟ್ಟಿಗೆ ಚೀನಾದ ವುಹಾನ್ನಲ್ಲಿರುವ ಜೀವಂತ ಪ್ರಾಣಿ ಮಾರುಕಟ್ಟೆಯೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಂತಹ ಮಾರುಕಟ್ಟೆಗಳನ್ನು ಮುಚ್ಚಬೇಕು ಎಂಬ ಮಾತುಗಳು ಎಲ್ಲೆಡೆ ಕೇಳಿಬರುತ್ತಿದ್ದರೂ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಮಾತ್ರ ಜಾಗತಿಕವಾಗಿ ಇರುವ ಜೀವಂತ ಪ್ರಾಣಿ ಮಾರುಕಟ್ಟೆಗಳನ್ನು ಮುಚ್ಚುವಂತೆ ಶಿಫಾರಸು ಮಾಡಿಲ್ಲ. ಬದಲಾಗಿ ಮಾರುಕಟ್ಟೆಗಳನ್ನು ಮುಚ್ಚಬಾರದು ಎಂದು ಅದರ ಪರವಾಗಿಯೇ ಮಾತನಾಡಿದೆ.
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಡಬ್ಲ್ಯುಎಚ್ಒ ಆಹಾರ ಸುರಕ್ಷಿತಾ ಮತ್ತು ಪ್ರಾಣಿ ರೋಗತಜ್ಞ ಪೀಟರ್ ಬೆನ್ ಎಂಬಾರೆಕ್ ಅವರು ಮಾತನಾಡಿ, ಜಾಗತಿಕವಾಗಿ ಲಕ್ಷಾಂತರ ಜನರಿಗೆ ಆಹಾರ ಮತ್ತು ಜೀವನೋಪಾಯವನ್ನು ಒದಗಿಸಲು ಪ್ರಾಣಿ ಮಾರುಕಟ್ಟೆಗಳ ಪಾತ್ರ ನಿರ್ಣಾಯಕವಾಗಿದೆ. ಕೆಲವೊಂದು ಸಮಯದಲ್ಲಿ ಮಾನವರಿಗೆ ಸಾಂಕ್ರಮಿಕ ಹರಡಿದರೂ ಸಹ ಮಾರುಕಟ್ಟೆಗಳನ್ನು ಮುಚ್ಚುವ ಬದಲು ಅದರ ಆಡಳಿತ ಸಿಬ್ಬಂದಿ ಸುಧಾರಣಾ ಕ್ರಮಗಳ ಬಗ್ಗೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಈ ಪರಿಸರ ವ್ಯವಸ್ಥೆಯಲ್ಲಿ ಆಹಾರ ಸುರಕ್ಷತೆ ತುಂಬಾ ಸುಲಭವಲ್ಲ. ಮಾರುಕಟ್ಟೆಯ ಒಳಗಡೆಯೇ ಕೆಲವೊಮ್ಮೆ ಇಂತಹ ಅವಘಡಗಳು ನಡೆಯುವುದರಲ್ಲಿ ಅಚ್ಚರಿಯಿಲ್ಲ. ಪ್ರಾಣಿ ಮಾರುಕಟ್ಟೆಗಳನ್ನು ಮಾನವನಿಂದ ಬೇರ್ಪಡಿಸುವುದು ಸೇರಿದಂತೆ ನೈರ್ಮಲ್ಯ ಹಾಗೂ ಆಹಾರ ಸುರಕ್ಷತಾ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಆಗಾಗ ಕಿಕ್ಕಿರಿದು ತುಂಬಿ ತುಳುಕುವ ಮಾರುಕಟ್ಟೆಗಳಲ್ಲಿ ಪ್ರಾಣಿಗಳಿಂದ ಮಾನವನಿಗೆ ರೋಗ ಹರಡುವುದನ್ನು ಕಡಿಮೆ ಮಾಡಬಹುದು ಎಂದು ಬೆನ್ ಎಂಬಾರೆಕ್ ಹೇಳಿದರು.
ವುಹಾನ್ ಮಾರುಕಟ್ಟೆಯಿಂದಲೇ ವೈರಸ್ ಜಾಗತಿಕವಾಗಿ ಹರಡಿದೆ ಎಂಬುದು ಈಗಲೂ ಸ್ಪಷ್ಟವಾಗಿಲ್ಲ. ಈ ಸಂಬಂಧ ಚೀನಾದಲ್ಲಿ ನಿರಂತರವಾಗಿ ತನಿಖೆ ನಡೆಯುತ್ತಿದೆ. ವೈರಸ್ನಿಂದ ಬೆಕ್ಕು, ಹುಲಿ ಹಾಗೂ ಶ್ವಾನಗಳು ಸಹ ಸಾವಿಗೀಡಾಗಿವೆ ಎಂದು ಅಧ್ಯಯನಗಳು ತಿಳಿಸಿವೆ. ಮತ್ತಷ್ಟು ಅಧ್ಯಯನಗಳು ಹಾಗೂ ತನಿಖೆ ನಡೆಯುತ್ತಿದ್ದು, ವೈರಸ್ ಹುಟ್ಟಿನ ಬಗ್ಗೆ ಇನ್ನು ಖಚಿತವಾಗಿಲ್ಲ ಎಂದು ತಿಳಿಸಿದರು. (ಏಜೆನ್ಸೀಸ್)