ನ್ಯೂಸ್

VIDEO: ಕುಡುಕರೇನೂ ಕರೊನಾ ವಾರಿಯರ್ಸ್​ ಅಲ್ಲ; ಆದರೂ ಅಂಗಡಿ ಮಾಲೀಕರಿಗೆ ದೇವರು..!

ಮಿರ್ಜಾಪುರ: ಬರೋಬ್ಬರಿ ಒಂದೂವರೆ ತಿಂಗಳ ನಂತರ ಇಂದು ದೇಶಾದ್ಯಂತ ಮದ್ಯದ ಅಂಗಡಿಗಳು ಬಾಗಿಲು ತೆರೆದಿವೆ.

ಮೇ 4ರಂದು ದೇಶದಲ್ಲಿ ಗ್ರೀನ್​ ಝೋನ್​ಗಳಲ್ಲಿ ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ಕೊಟ್ಟಿತ್ತು. ಸಾಮಾಜಿಕ ಅಂತರ ನಿಯಮ ಪಾಲನೆಯ ಷರತ್ತು ವಿಧಿಸಿತ್ತು.

ಮೇ 3ರ ಸಂಜೆಯಿಂದಲೇ ಅಂಗಡಿ ಮಾಲೀಕರ ಭರ್ಜರಿ ಸಿದ್ದತೆ ಶುರುವಾಗಿತ್ತು. ಹಾಗೇ ಇಂದು ಮುಂಜಾನೆಯಿಂದಲೇ ಎಣ್ಣೆಪ್ರಿಯರು ಅಂಗಡಿಗಳ ಎದುರು ಸಾಲುಸಾಲಾಗಿ ನಿಂತು, ಬೇಕಾದಷ್ಟು ಖರೀದಿಸಿಯೂ ಆಯ್ತು. ಕೆಲವು ಕಡೆಯಂತೂ ಕುಡುಕರು ಫುಲ್​ ಟೈಟ್​ ಆಗಿ ಪಬ್ಲಿಕ್​ನಲ್ಲಿ ಡ್ಯಾನ್ಸ್​ ಮಾಡಿದ್ದಾರೆ. ಮತ್ತೆ ಹಲವರು ರೋಡ್​, ಫುಟ್​ಪಾತ್​ನಲ್ಲಿ ತಣ್ಣಗೆ ಮಲಗಿದ್ದಾರೆ. ಒಟ್ಟಾರೆ ಇಡೀ ದೇಶದಲ್ಲಿ ಇಂದು ಎಣ್ಣೆ ಪ್ರಹಸನ ವಿವಿಧ ರೀತಿಯಲ್ಲಿ ನಡೆದಿದೆ.

ಈ ಮಧ್ಯೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿರುವ ಎಣ್ಣೆ ಅಂಗಡಿಯೊಂದರ ಮಾಲೀಕ ಒಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಬೆಳ್ಳಂಬೆಳಗ್ಗೆ ತಮ್ಮ ಅಂಗಡಿಗೆ ಬಂದ ಮದ್ಯದ ಗ್ರಾಹಕರ ಮೇಲೆ ಹೂವಿನ ಎಸಳುಗಳನ್ನು ಹಾಕಿ ಸ್ವಾಗತಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗವಸು, ಮಾಸ್ಕ್​ಗಳನ್ನು ಹಾಕಿಕೊಂಡು ಸಾಲಾಗಿ ನಿಂತ ಕುಡುಕರ ಮೇಲೆ ಮಾಲೀಕ ಪುಷ್ಪಗಳ ಸುರಿಮಳೆಗೈದಿದ್ದಾರೆ. ಎಲ್ಲ ಕಡೆ ಕರೊನಾ ವಾರಿಯರ್ಸ್​ಗಳ ಮೇಲೆ ಪುಷ್ಪವೃಷ್ಟಿ ಸುರಿಸಿದರೆ, ಇಲ್ಲಿ ಮಾಲೀಕ ಕುಡುಕರ ಮೇಲೆ ಹೂವಿನ ಎಸಳು ಹಾಕಿದ್ದಾರೆ.

ಈ ವಿಡಿಯೋವನ್ನು ನೆಟ್ಟಿಗರೊಬ್ಬರು ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ವೈರಲ್​ ಆಗಿದೆ. ಗ್ರಾಹಕರೇ ದೇವರು ಎಂದು ಕಾಮೆಂಟ್​ಗಳು ಬಂದಿವೆ..!