ನ್ಯೂಸ್

ಸೂರ್ಯನ ಶಾಖಕ್ಕೆ ತತ್ತರಿಸಿ ಒಂದೇ ದಿನದಲ್ಲಿ 34 ಮಂದಿ ಸಾವು; 40 ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥ

ನವದೆಹಲಿ: ಬೇಸಿಗೆ ಮುಗಿದು ಮಳೆಗಾಲ ಆರಂಭವಾದರೂ ಉತ್ತರ ಭಾರತದ ಹಲವೆಡೆ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 34ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕಳೆದ 24 ಗಂಟೆಗಳಲ್ಲಿ ದೆಹಲಿಯ ರಾಮ್ ಮನೋಹರ್ ಲೋಹಿಯಾ( ಆರ್‌ಎಂಎಲ್) ಹಾಗೂ ಸಫ್ದರ್‌ಜಂಗ್ ಆಸ್ಪತ್ರೆಗಳಲ್ಲಿ ಶಾಖಾಘಾತದಿಂದ ಒಟ್ಟು 17 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲ ದಿನಗಳಿಂದ ದೆಹಲಿಯಲ್ಲಿ ಬಿಸಿಗಾಳಿ ತೀವ್ರತೆ ಹೆಚ್ಚಿತ್ತು. ಇಂದು (ಗುರುವಾರ) ಬೆಳಗ್ಗೆ ಸಾಧಾರಣ ಮಳೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು, ಅಧಿಕ ತಾಪಮಾನದಿಂದ ದೆಹಲಿಯ ಆಸ್ಪತ್ರೆಗಳಲ್ಲಿ ಸಾವುನೋವುಗಳು ಮತ್ತು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಬಿಸಿಗಾಳಿಯಿಂದಾಗಿ ಅಸ್ವಸ್ಥಗೊಂಡು ಅನೇಕ ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ 17 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಏರಿಕೆಯಾಘುವ ಸಂಭವವಿದ್ದು, ಅಗತ್ಯೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದೆ.

ಇದಲ್ಲದೆ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶದ ಕೆಲವು ಭಾಗಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದ್ದು, ಈವರೆಗೆ 40 ಸಾವಿರಕ್ಕೂ ಅಧಿಕ ಮಂದಿ ಬಿಸಿಗಾಳಿಯಿಂದಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಗತ್ಯೆ ಮುನ್ನೆಚ್ಚರಿಕೆಯನ್ನು ವಹಿಸಲಾಗಿದ್ದು, ಜನರು ಎಚ್ಚರದಿಂದಿರಬೇಕು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.