ನ್ಯೂಸ್

VIDEO| ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿದ ಚಿರತೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆಯ ಓಡಾಟ

Mandara

ಗಾಜಿಯಾಬಾದ್​: ದೇಶದಲ್ಲಿ ಕಾಡೆಲ್ಲ ನಾಡಾಗಿ ಬದಲಾವಣೆ ಆಗಲಾರಂಭಿಸದಾಗಿಂದ ಕಾಡು ಪ್ರಾಣಿಗಳು ನಾಡಿಗೆ ಬಂದು ಓಡಾಡುವ ಘಟನೆ ಸಾಮಾನ್ಯವಾಗಿಬಿಟ್ಟಿದೆ. ಇದೀಗ ಅದೇ ರೀತಿಯಲ್ಲಿ ಚಿರತೆಯೊಂದು ನಗರದ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ನಡೆದಿದೆ.

ನಗರದ ರಾಜ್ನಾಗರ ರಸ್ತೆಯಲ್ಲಿ ಚಿರತೆ ಓಡಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಅಭಿಷೇಕ್​ ಪ್ರಸಾದ್​ ಹೆಸರಿನವರು ಟ್ವಿಟ್ಟರ್​ನಲ್ಲಿ ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಗಾಜಿಯಾಬಾದ್​ ಅಭಿವೃದ್ಧಿ ಪ್ರಾಧಿಕಾರ (ಜಿಡಿಎ) ಉಪಾಧ್ಯಕ್ಷರ ಕಚೇರಿಯ ಜನರೇಟರ್​ ಕೋಣೆಗೆ ಇದೇ ಚಿರತೆ ನುಗ್ಗಿತ್ತು. ಸಿಬ್ಬಂದಿಯೊಬ್ಬ ಜನರೇಟರ್​ ಪ್ರಾರಂಭಿಸಲು ಕೋಣೆಗೆ ಹೋಗುತ್ತಿದ್ದಂತೆ ಚಿರತೆ ಆತನ ಮೇಲೆ ಎರಗಿತ್ತು. ಆಗ ಇತರೆ ಸಿಬ್ಬಂದಿಗಳು ಕೋಲು ಹಿಡಿದು ಚಿರತೆಗೆ ಹೆದರಿಸಿದ್ದ ಹಿನ್ನೆಲೆಯಲಲ್ಲಿ ಚಿರತೆ ಅಲ್ಲಿಂದ ಓಡಿ ಮರವೊಂದನ್ನು ಹತ್ತಿ ನಂತರ ಕಾಣೆಯಾಗಿತ್ತು. ಇದೀಗ ಅದೇ ಚಿರತೆ ರಸ್ತೆಗಳಲ್ಲಿ ಓಡಾಡುತ್ತಿರುವ ದೃಶ್ಯ ಸಿಕ್ಕಿದೆ.

ಚಿರತೆಯನ್ನು ಸೆರೆಹಿಡಿಯುವುದಕ್ಕಾಗಿ ಅರಣ್ಯ ಇಲಾಖೆಯ ಐದು ತಂಡಗಳನ್ನು ನಿಯೋಜಿಸಲಾಗಿದೆ. ತಂಡವು ಚಿರತೆಯನ್ನು ಹುಡುಕುತ್ತಿದೆ. ಚಿರತೆ ಕಂಡುಬಂದ ನಗರಗಳಲ್ಲಿ ಸ್ಥಳೀಯರಿಗೆ ಮನೆಯಿಂದ ಹೊರಬರದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್​ ಶಂಕರ್​ ಪಾಂಡೆ ತಿಳಿಸಿದ್ದಾರೆ. (ಏಜೆನ್ಸೀಸ್​)