ಹಾಂಗ್ಕಾಂಗ್: ಕೊಲೆ ಮಾಡಿ ಫ್ರಿಡ್ಜ್ನಲ್ಲಿ ಶವ ಇಡುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದ್ದವು. ಇದೀಗ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದ್ದು, ರೂಪದರ್ಶಿಯೊಬ್ಬಳನ್ನು ಕೊಲೆ ಮಾಡಿ ಆಕೆಯ ಕಾಲನ್ನು ಫ್ರಿಡ್ಜ್ನಲ್ಲಿ ಇಡಲಾಗಿದೆ. ಮತ್ತೊಂದೆಡೆ ಆಕೆಯ ರುಂಡಕ್ಕಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಇಂಥದ್ದೊಂದು ಪ್ರಕರಣ ಹಾಂಗ್ಕಾಂಗ್ನಲ್ಲಿ ನಡೆದಿದೆ. ಅಲ್ಲಿನ 28 ವರ್ಷಗಳ ರೂಪದರ್ಶಿ ಆ್ಯಬಿ ಚೊಯ್ ಕೊಲೆಯಾದವಳು. ನಗರದ ಹೊರವಲಯದ ಟಾಯ್ಪೊ ಜಿಲ್ಲೆಯ ಮನೆಯೊಂದರ ಫ್ರಿಡ್ಜ್ನಲ್ಲಿ ಆಕೆಯ ಕಾಲು ಹಾಗೂ ದೇಹವನ್ನು ತುಂಡರಿಸಲು ಬಳಸಿದ್ದ ಆಯುಧಗಳು ಪತ್ತೆಯಾಗಿವೆ. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಾಂಗ್ಕಾಂಗ್ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಈಕೆಯ ಕಾಲಿನ ಭಾಗ ಸಿಕ್ಕಿದ್ದು, ರುಂಡ-ಮುಂಡ ಹಾಗೂ ಕೈಗಳ ಭಾಗಗಳು ಸಿಗಬೇಕಿವೆ. ಕಾಲು ಪತ್ತೆಯಾದ ಜಾಗದಲ್ಲಿ ಮಾಂಸ ಕತ್ತರಿಸುವ ಆಯುಧ, ಎಲೆಕ್ಟ್ರಿಕ್ ಗರಗಸಗಳು ಕೂಡ ಸಿಕ್ಕಿವೆ.
ಇದನ್ನೂ ಓದಿ: ಹುಚ್ಚುನಾಯಿ ಕಡಿತಕ್ಕೆ 4 ವರ್ಷದ ಮಗು ಬಲಿ; 2 ತಿಂಗಳ ಹಿಂದೆಯೂ ನಾಯಿ ಕಡಿತದಿಂದ ಮಕ್ಕಳಿಬ್ಬರು ಸಾವಿಗೀಡಾಗಿದ್ದರು!
ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ಚೊಯ್ ಹತ್ಯೆ ಸ್ಥಳೀಯವಾಗಿ ಸಂಚಲನ ಸೃಷ್ಟಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದ್ದು, ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ಮಂಗಳವಾರದಿಂದ ನಾಪತ್ತೆಯಾಗಿದ್ದ ರೂಪದರ್ಶಿಯ ಕಾಲಿನ ಭಾಗ ಶುಕ್ರವಾರ ಸಿಗುವ ಮೂಲಕ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು. ಕೊಲೆಯ ಹಿಂದೆ ಆಕೆಯ ಮಾಜಿ ಪತಿ ಮತ್ತಿತರರ ಕೈವಾಡ ಇದೆ ಎನ್ನಲಾಗಿದ್ದು, ಆ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.