ನವದೆಹಲಿ: ಅತ್ಯಂತ ತುರಿಸಿನಿಂದ ಹಾಗೂ ಪೈಪೋಟಿಯಿಂದ ನಡೆಯುತ್ತಿದೆ ಕರೊನಾ ವೈರಸ್ ನಿಗ್ರಹದ ಲಸಿಕೆ ಸಂಶೋಧನೆ ಕಾರ್ಯ. ಈ ತರಾತುರಿ ಒಂದು ಮಟ್ಟಿಗೆ ಇದು ಸಾರ್ವಜನಿಕ ವಲಯದಲ್ಲಿ ಭೀತಿಗೂ ಕಾರಣವಾಗಿತ್ತು. ತ್ವರಿತವಾಗಿ ಮಾರುಕಟ್ಟೆಗೆ ಪರಿಚಯಿಸಿಬೇಕು ಎಂಬ ಕಾರಣಕ್ಕೆ ಸುರಕ್ಷತೆಯನ್ನೇ ಕಡೆಗಣಿಸಬಹುದು ಎಂಬ ಆತಂಕವೂ ವ್ಯಕ್ತವಾಗಿತ್ತು.
ಆದರೆ, ನಾಗರಿಕರಿಗೆ ಅಂಥ ಭಯ ಬೇಡ ಎಂದು ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ 9 ಕಂಪನಿಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿವೆ. ಸಂಶೋಧನೆ ವೇಳೆ ಎಲ್ಲ ಹಂತಗಳನ್ನು ಕಟ್ಟುನಿಟ್ಟಾಗಿ ಪೂರೈಸಲಾಗುವುದು ಹಾಗೂ ಉನ್ನತಮಟ್ಟದ ವೈಜ್ಞಾನಿಕ ಹಾಗೂ ನೈತಿಕ ಮೌಲ್ಯಗಳನ್ನು ಪಾಲಿಸಲಾಗುವುದು ಎಂದು ಹೇಳಿವೆ.
ಲಸಿಕೆಯ ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸುತ್ತಿರುವ ಬ್ರಿಟನ್ನಿನ ಆಸ್ಟ್ರಾಜೆನೆಕಾ, ಅಮೆರಿಕದ ಮಾಡೆರ್ನಾ, ಫೈಝರ್ ಸೇರಿ ಇದರಲ್ಲಿ ಸೇರಿವೆ. ಇದಲ್ಲದೇ, ನೋವಾವಾಕ್ಸ್, ಸ್ಯಾನೋಫಿ, ಗ್ಲಾಕ್ಸೋಸ್ಮಿತ್ಕ್ಲೈನ್, ಜಾನ್ಸನ್ ಆ್ಯಂಡ್ ಜಾನ್ಸನ್ ಬಯೋಎನ್ಟೆಕ್ ಹಾಗೂ ಮರ್ಕ್ ಆ್ಯಂಡ್ ಕಂಪನಿ ಇಂಥದ್ದೊಂದು ಭರವಸೆಯನ್ನು ಜನರಿಗೆ ನೀಡಿವೆ.
ಲಸಿಕೆ ನೀಡಿದ ವ್ಯಕ್ತಿಯ ಆರೋಗ್ಯ ಹಾಗೂ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಪ್ರಮಾಣ ಮಾಡಿವೆ. ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸಿದ ಬಳಿಕವಷ್ಟೇ ಲಸಿಕೆಗೆ ಮಾನ್ಯತೆ ಪಡೆಯುವುದಾಗಿ ಹೇಳಿವೆ. ವಿವಿಧ ದೇಶಗಳಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಲಸಿಕೆಯನ್ನು ತ್ವರಿತವಾಗಿ ಪೂರೈಸುವಂತೆ ಒತ್ತಡಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿರುವುದು ಗಮನಾರ್ಹ ಸಂಗತಿಯಾಗಿದೆ.
ಇದನ್ನೂ ಓದಿ; ಆಕ್ಸ್ಫರ್ಡ್ ವಿವಿ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್ ಸ್ಥಗಿತ; ಲಸಿಕೆ ಪಡೆದ ವ್ಯಕ್ತಿಗೆ ಏನಾಗಿದೆ..?
ಅಮೆರಿಕದಲ್ಲಿ ನವೆಂಬರ್ನಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಅದಕ್ಕೂ ಮುನ್ನ ಲಸಿಕೆ ಬಿಡುಗಡೆಯಾಗಬೇಕೆಂದು ಟ್ರಂಪ್ ಸರ್ಕಾರ ಭಾರಿ ಒತ್ತಡ ಹೇರಿದೆ. ಆದರೆ, ಅಮೆರಿಕ ಸರ್ಕಾರ ಲಸಿಕೆಗಾಗಿ ಒಪ್ಪಂದ ಮಾಡಿಕೊಂಡಿರುವ ಮಾಡೆರ್ನಾ, ಫೈಝರ್, ಬಯೋಎನ್ಟೆಕ್ ಹಾಗೂ ಗ್ಲಾಕ್ಸೋಸ್ಮಿತ್ಕ್ಲೈನ್ ಕಂಪನಿಗಳು ಕೂಡ ತರಾತುರಿಗೆ ಮಣಿಯುವುದಿಲ್ಲ ಹೇಳಿರುವುದು ಟ್ರಂಪ್ ಬಿಸಿತುಪ್ಪವಾದರೆ ಅಚ್ಚರಿಯಿಲ್ಲ. ಹೀಗಾದರೆ, ವರ್ಷಾಂತ್ಯಕ್ಕೂ ಲಸಿಕೆ ದೊರೆಯುವುದು ಅನುಮಾನವಾಗಲಿದೆ.