ತಿರುವನಂತಪುರಂ: ಜುದಾಸ್ನು ಯೇಸುಕ್ರಿಸ್ತನಿಗೆ ದ್ರೋಹ ಮಾಡಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಪಾಲಕ್ಕಾಡ್ನಲ್ಲಿ ಮೆಟ್ರೋ ಮ್ಯಾನ್ ಇ ಶ್ರೀಧರನ್ ಪರವಾಗಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಒಂದಿಷ್ಟು ಬಂಗಾರದ ತುಣಕುಗಳಿಗಾಗಿ ವಿಜಯನ್ ಅವರು ಕೇರಳ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ವಿಜಯನ್ ಅವರ ಗೋಲ್ಡ್ ಸ್ಮಗ್ಲಿಂಗ್ ಕೇಸ್ ಬಗ್ಗೆ ಆರೋಪಿಸಿದರು.
ಎಲ್ಡಿಎಫ್ ಹಾಗೂ ಯುಡಿಎಫ್ ಹೆಸರಿಗಷ್ಟೇ ಬೇರೆ ಬೇರೆ. ಆದರೆ, ಅವೆರಡು ಗುಣಧರ್ಮಗಳಲ್ಲಿ ಒಂದೇ. ಇಲ್ಲಿವರೆಗೂ ಮ್ಯಾಚ್ ಪಿಕ್ಸಿಂಗ್ ಆಟ ಆಡಿಕೊಂಡು ಕೇರಳದ ಜನತೆಗೆ ಮೋಸ ಮಾಡಿವೆ ಎಂದು ಮೋದಿ ಆರೋಪಿಸಿದರು. ಐದು ವರ್ಷ ಅವರು (ಎಲ್ಡಿಎಫ್) ಲೂಟಿ ಹೊಡೆದರೆ, ಮತ್ತೆ ಐದು ವರ್ಷ ಇವರು (ಯುಡಿಎಫ್) ಲೂಟಿ ಹೊಡೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದೇ ಮೊದಲ ಬಾರಿಗೆ ಕೇರಳ ಯುವಕರು ಎಲ್ಡಿಎಫ್ ಹಾಗೂ ಯುಡಿಎಫ್ ಮೇಲೆ ತೀವ್ರ ಭ್ರಮನಿರಸನಗೊಂಡಿದ್ದಾರೆ ಎಂದರು ಮೋದಿ.
ಬಿಜೆಪಿಯ ಕೇರಳ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಮೆಟ್ರೊ ಮ್ಯಾನ್ ಇ ಶ್ರೀಧರನ್ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ ಮೋದಿ ಅವರು, ಶ್ರೀಧರನ್ ಒಬ್ಬ ನಿಜವಾದ ಕೇರಳಿಗರಾಗಿದ್ದಾರೆ. ಅವರು ಮಾಡಿರುವ ಕೆಲಗಳನ್ನು ಇಡೀ ರಾಷ್ಟ್ರವೇ ಸ್ಮರಿಸುತ್ತದೆ ಎಂದು ಹೇಳಿದರು. (ಏಜೇನ್ಸಿಸ್).