ನ್ಯೂಸ್

ನಟ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರು… ಕಡೆಗೂ ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ವಕೀಲರು!

ಮೋಹನ್​ ಶೆಟ್ಟಿ

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ನಟ ದರ್ಶನ್​ ಮತ್ತು ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳು ಇದೀಗ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ. ಇನ್ನು ನಿನ್ನೆಯಷ್ಟೇ (ಜೂ.15) ಮುಂದಿನ ಐದು ದಿನಗಳವರೆಗೂ ಹತ್ಯೆ ಕೇಸ್​ನ ಆರೋಪಿಗಳು ಪೊಲೀಸರ ಕಸ್ಟಡಿಯಲ್ಲಿರಲಿ ಎಂದು ನ್ಯಾಯಾಲಯ ಆದೇಶಿಸಿತು. ಅದರಂತೆಯೇ ಇದೀಗ ದರ್ಶನ್​ ಮತ್ತು ಇತರೆ ಆರೋಪಿಗಳು ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

ರೇಣುಕಸ್ವಾಮಿ ಪವಿತ್ರಾಗೆ ಅಶ್ಲೀಲ ಸಂದೇಶ ಮತ್ತು ಫೋಟೋ ಕಳಿಸಿದ ಎಂಬ ಕಾರಣಕ್ಕೆ ಆತನನ್ನು ಶೆಡ್​ನಲ್ಲಿ ದರ್ಶನ್​ ಮತ್ತು ಬಂಧಿತ ಆರೋಪಿಗಳು, ಚಿತ್ರಹಿಂಸೆ ಕೊಟ್ಟು ಹತ್ಯೆಗೈದಿದ್ದಾರೆ ಎಂದು ಪೊಲೀಸರ ವರದಿಯಲ್ಲಿ ತಿಳಿದುಬಂದಿದ್ದು, ಸದ್ಯ ನಟನ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಭರದಿಂದ ಸಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಪರ ವಕೀಲರು, ಮಾಧ್ಯಮಗಳಿಗೆ ಹಲವು ವಿಚಾರಗಳ ಕುರಿತು ಆಗಾಗ್ಗೆ ಸ್ಪಷ್ಟನೆ ಕೂಡ ನೀಡುತ್ತ ಬಂದಿದ್ದಾರೆ.

ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದ ಮೊದಲ ದಿನದಿಂದಲೂ ಆರೋಪಿಗಳಾದ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧದ ಬಗ್ಗೆ ಭಾರೀ ಚರ್ಚೆಗಳು ಭುಗಿಲೆದ್ದಿವೆ. ಒಂದೆಡೆ ಇವರಿಬ್ಬರದ್ದು ಪತಿ-ಪತ್ನಿ ಸಂಬಂಧ ಎಂದು ಒಂದಷ್ಟು ವದಂತಿಗಳು ಹರಿದಾಡಿದರೆ, ಮತ್ತೊಂದೆಡೆ ಇಬ್ಬರೂ ಕೂಡ ಬಹಳ ಆತ್ಮೀಯರು ಎಂದು ಹೇಳಲಾಗುತ್ತಿದೆ. ಸದ್ಯ ಈ ಕುರಿತು ಸ್ವತಃ ನಟನ ಪರ ವಕೀಲರೇ ಸ್ಪಷ್ಟನೆ ನೀಡಿದ್ದಾರೆ.

"ಕೊಲೆ ಪ್ರಕರಣದ ಪ್ರಮುಖ ಶಂಕಿತರಲ್ಲಿ ಒಬ್ಬರಾದ ಪವಿತ್ರಾ ಗೌಡ ಅವರು ನಟನ ಸ್ನೇಹಿತ ಮಾತ್ರವೇ ಹೊರತು ಅವರ ಪತ್ನಿಯಲ್ಲ. ಪವಿತ್ರಾ ದರ್ಶನ್​ರ ಎರಡನೇ ಪತ್ನಿ ಎಂಬುದು ಶುದ್ಧ ಸುಳ್ಳು. ಆಕೆ ಕೇವಲ ಸ್ನೇಹಿತೆ. ತಮ್ಮ ಸಹ-ನಟರಾಗಿದ್ದರು ಮತ್ತು ಈಗ ಅವರ ಮಧ್ಯೆ ಉತ್ತಮ ಸ್ನೇಹ ಸಂಬಂಧವಿದೆ. ಅದನ್ನು ಬಿಟ್ಟು ಬೇರೇನೂ ಇಲ್ಲ" ಎಂದು ವಕೀಲ ಅನಿಲ್ ಬಾಬು ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).