ಮುಂಬೈ: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (NCP) ಹಿರಿಯ ನಾಯಕ, ಮಾಜಿ ಸಚಿವ ಬಾಬಾ ಸಿದ್ದಿಕ್ (Baba Siddique) ಅವರ ಹತ್ಯೆ ರಾಷ್ಟ್ರವ್ಯಾಪಿ ಹೊಸ ಚರ್ಚೆಯನ್ನೇ ಹುಟ್ಟುಹಾಕಿದ್ದು, ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ (lawrence Bishnoi) ಹತ್ಯೆಯ ಹೊಣೆ ಹೊತ್ತಿದೆ. ನವರಾತ್ರಿ ದಿನದಂದು ಜನನಿಬಿಡ ಪ್ರದೇಶದಲ್ಲಿ ಶೂಟೌಟ್ ನಡೆದಿದ್ದು, ಸಲ್ಮಾನ್ ಖಾನ್ (Salman Khan) ಇವರ ಮೇನ್ ಟಾರ್ಗೆಟ್ (Main Target) ಎಂದು ಹೇಳಲಾಗಿದ್ದು, ಜೈಲಿನಲ್ಲಿದ್ದುಕೊಂಡೆ ಬಿಷ್ಣೋಯಿ ತನ್ನ ಗ್ಯಾಂಗ್ಅನ್ನು ಆಪರೇಟ್ ಮಾಡುತ್ತಿರುವುದು ದೇಶದಲ್ಲಿ ಕಾನೂನು-ಸುವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿವಿಧ ಪ್ರಕರಣಗಳಲ್ಲಿ ಬಂಧಿತರಾಗಿರುವ ಲಾರೆನ್ಸ್ ಬಿಷ್ಣೋಯ್ (lawrence Bishnoi) ಸದ್ಯ ಗುಜರಾತ್ನ ಸಬರಮತಿ (Sabarmati) ಕೇಂದ್ರ ಕಾರಾಗೃಹದಲ್ಲಿದ್ದು, ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನೂ ಆಪರೇಟ್ ಮಾಡುತ್ತಿದ್ದಾನೆ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಇದಲ್ಲದೆ ಈತನ ಗ್ಯಾಂಗ್ನಲ್ಲಿ 700ಕ್ಕೂ ಅಧಿಕ ಶೂಟರ್ಗಳಿದ್ದು (Shooters), ಈ ಗ್ಯಾಂಗ್ ಹೆಸರು ಮಾಡಿದ್ದು ಹಾಗೂ ಸಲ್ಮಾನ್ ಖಾನ್ (Salman Khan) ವಿರುದ್ಧ ಇಷ್ಟೊಂದು ದ್ಷೇಷ ಸಾಧಿಸಲು ಕಾರಣವೇನು ಎಂಬುದನ್ನು ನೋಡೋಣ ಬನ್ನಿ.
1998ರಲ್ಲಿ ಸಲ್ಮಾನ್ ಖಾನ್ ನಟನೆಯ ಹಮ್ ಸಾಥ್ ಸಾಥ್ ಹೈ ಸಿನಿಮಾದ ಚಿತ್ರೀಕರಣ ಸಮಯದಲ್ಲಿ ಕೃಷ್ಣಮೃಗವನ್ನು (Deer) ಬೇಟೆಯಾಡಿದ್ದರು ಎಂಬ ಆರೋಪಿ ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್ ಖಾನ್ (Salman Khan) 2016ರಲ್ಲಿ ಖುಲಾಸೆಗೊಂಡಿದ್ದರು. ಇದೆಲ್ಲದರ ಹೊರತಾಗಿಯೂ ಬಿಷ್ಣೋಯ್ ಗ್ಯಾಂಗ್ (lawrence Bishnoi) ಸಲ್ಲು ಹತ್ಯೆಗೆ ಸಂಚು ಹಾಕಿ ಕುಳಿತಿದ್ದು, ಇದಕ್ಕೆ ಕಾರಣವನ್ನು ಸಹ ನೀಡಲಾಗಿದೆ.
ಬಿಷ್ಣೋಯ್ (lawrence Bishnoi) ಪ್ರತಿನಿಧಿಸುವ ಬುಡಕಟ್ಟು ಸಮುದಾಯವು ಪವಿತ್ರ ಪ್ರಾಣಿ ಎಂದೇ ಪೂಜಿಸುವ ಕೃಷ್ಣಮೃಗವನ್ನು (Deer) ಕೊಂದ ಸಲ್ಮಾನ್ ಖಾನ್ (Salman Khan) ಅವರನ್ನು ಮುಗಿಸುವುದು ಲಾರೆನ್ಸ್ ಬಿಷ್ಣೋಯಿ ಗುರಿಯಾಗಿದೆ. ಅನೇಕ ಸಂದರ್ಶನದಲ್ಲಿ ಈ ವಿಚಾರವನ್ನು ಕುಖ್ಯಾತ ಗ್ಯಾಂಗ್ಸ್ಟರ್ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಇದಲ್ಲದೆ ಈತ ಜೈಲಿನಲ್ಲಿದ್ದುಕೊಂಡೆ ಎಲ್ಲವನ್ನು ಆಪರೇಟ್ ಮಾಡುತ್ತಿದ್ದು, 2022ರಲ್ಲಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೇವಾಲಾರ ಹತ್ಯೆಯನ್ನು ಈತನೇ ಮಾಡಿಸಿದ್ದ.
ಲಾರೆನ್ಸ್ ಬಿಷ್ಣೋಯ್ (lawrence Bishnoi) 1993ರಲ್ಲಿ ಪಂಜಾಬ್ನ ಫಿರೋಜ್ಪುರ್ನ ಊರೊಂದರಲ್ಲಿ ಜನಿಸಿದ ವ್ಯಕ್ತಿ. ಈತನ ತಂದೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೆಬಲ್ (Police Constable) ಆಗಿ, ನಂತರ ಕೃಷಿಗಾರಿಕೆ ಆರಂಭಿಸಿದರು. ಪಂಜಾಬ್, ಹರ್ಯಾಣ ಮತ್ತು ರಾಜಸ್ಥಾನದ ಗಡಿಭಾಗದಲ್ಲಿರುವ ಅಬುಹರ್ನಲ್ಲಿ 12ನೇ ತರಗತಿಯವರೆಗೂ ಓದಿದ ಲಾರೆನ್ಸ್, ಬಳಿಕ ಚಂಡೀಗಡದ ಡಿಎವಿ ಕಾಲೇಜಿಗೆ (DAB College) ಸೇರುತ್ತಾನೆ. ಪಂಜಾಬ್ ಯೂನಿವರ್ಸಿಟಿ ಕ್ಯಾಂಪಸ್ ವಿದ್ಯಾರ್ಥಿಗಳ ಮಂಡಳಿಗೆ ಸೇರಿದ ಬಳಿಕ ಗೋಲ್ಡಿ ಬ್ರಾರ್ (Goldie Brar) ಪರಿಚಯ ಮಾಡಿಕೊಂಡ ಲಾರೆನ್ಸ್ ಅಪರಾಧ ಲೋಕಕ್ಕೆ ಎಂಟ್ರಿ ಕುಖ್ಯಾತ ಗ್ಯಾಂಗ್ಸ್ಟರ್ ಆಗುತ್ತಾನೆ.
2012ರಿಂದಲೂ ಈಚೆಗೆ ದೇಶದ ವಿವಿಧ ಜೈಲುಗಳಲ್ಲಿ ಇರುವ ಲಾರೆನ್ಸ್ ಬಿಷ್ಣೋಯ್ 2013ರಲ್ಲಿ ಮುಖ್ತಸರ್ನಲ್ಲಿ ಗವರ್ನ್ಮೆಂಟ್ ಕಾಲೇಜು ಚುನಾವಣೆಯ ವಿಜೇತ ಅಭ್ಯರ್ಥಿಯನ್ನು ಗುಂಡಿಟ್ಟು ಕೊಂದಿದ್ದ. ಲೂಧಿಯಾನ ನಗರಸಭೆ ಚುನಾವಣೆಯಲ್ಲಿ ತನ್ನ ಪ್ರತಿಸ್ಪರ್ಧಿಯನ್ನು ಮುಗಿಸಿದ ಆರೋಪ ಈತನ ಮೇಲಿದೆ. ಇದಲ್ಲದೆ ಸಿಧು ಮೂಸೆವಾಲ, ಕೆನಡಾದ ಗ್ಯಾಂಗ್ಸ್ಟರ್ ಸುಖದೂಲ್ ಸಿಂಗ್ ಅಲಿಯಾಸ ಸುಖ ದುನೆಕೆ ಮೊದಲಾದವರ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಕೈವಾಡ ಇರುವುದು ಬೆಳಕಿಗೆ ಬಂದಿದೆ.
ಲಾರೆನ್ಸ್ ಬಿಷ್ಣೋಯ್ನನ್ನು ಭದ್ರತಾ ದೃಷ್ಟಿಯಿಂದ ವಿವಿಧ ಜೈಲುಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಭರತ್ಪುರ್ ಜೈಲು, ತಿಹಾರ್ ಜೈಲಿನಲ್ಲಿ ಈತನನ್ನು ಇಡಲಾಗಿತ್ತು. ಈಗ ಸಬರಮತಿ ಜೈಲಿನಲ್ಲಿದ್ದಾನೆ. ಜೈಲು ಅಧಿಕಾರಿಗಳ ಪ್ರಕಾರ ಈತ ವಿಪಿಎನ್ (VPN) ಮೂಲಕ ತನ್ನ ಗ್ಯಾಂಗ್ ಸದಸ್ಯರೊಂದಿಗೆ ಮಾತನಾಡುತ್ತಾನೆ. ಜೈಲಿನಲ್ಲೇ ಇದ್ದುಕೊಂಡು ಟಿವಿ ನ್ಯೂಸ್ ಚಾನಲ್ಗಳಿಗೆ ಈತ ಸಂದರ್ಶನ ನೀಡಿದ್ದಿದೆ. ಜೈಲಿನ ಅಧಿಕಾರಿಗಳ ಬೆಂಬಲ ಇಲ್ಲದೇ ಇದು ನಡೆಯುವುದು ಅಸಾಧಯವಾಗಿದ್ದು, ಕಾನೂನು-ಸುವ್ಯವಸ್ಥೆಯ ಕುರಿತು ಜನರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.