ನವದೆಹಲಿ: ಸುಪ್ರೀಂಕೋರ್ಟ್ ( Supreme Court ) ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ( DY Chandrachud ) ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ನ್ಯಾಯದೇವತೆಯ ( Goddess of Justice ) ಕಣ್ಣಿಗೆ ಕಟ್ಟಿದ್ದ ಬಟ್ಟೆಯನ್ನು ತೆಗೆಸಿ, ಆಕೆಯ ಕೈಯಲ್ಲಿದ್ದ ಖಡ್ಗದ ಬದಲು ಸಂವಿಧಾನವನ್ನು ಇರಿಸುವ ಮೂಲಕ ಐತಿಹಾಸಿಕ ಹೆಜ್ಜೆಯನ್ನಿಟ್ಟಿದ್ದಾರೆ.
ಸುಪ್ರೀಂಕೋರ್ಟ್‌ನಲ್ಲಿ ನ್ಯಾಯದೇವತೆಯ ನೂತನ ವಿಗ್ರಹವನ್ನು ಬುಧವಾರ (ಅ.16) ಅನಾವರಣಗೊಳಿಸಲಾಯಿತು. ನ್ಯಾಯದೇವತೆ ಅಂದಾಗಲೇ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿರುವ ಚಿತ್ರಣ ಇಷ್ಟು ದಿನ ನಮ್ಮ ಕಣ್ಣ ಮುಂದೆ ಬರುತ್ತಿತ್ತು. ಆದರೆ, ಈಗ ನ್ಯಾಯದೇವತೆ ಕಣ್ಣು ತೆರೆದಿದ್ದಾಳೆ. ಹೌದು, ಹೊಸದಾಗಿ ಅನಾವರಣಗೊಂಡ ವಿಗ್ರಹದಲ್ಲಿ ನ್ಯಾಯದೇವತೆಯ ಕಣ್ಣಿಗೆ ಯಾವುದೇ ಬಟ್ಟೆಯನ್ನು ಕಟ್ಟಲಾಗಿಲ್ಲ. ಅಲ್ಲದೆ, ಕೈಯಲ್ಲಿ ಖಡ್ಗದ ಬದಲಿಗೆ ಸಂವಿಧಾನವನ್ನು ಹಿಡಿದಿದ್ದಾಳೆ. ದೇಶದಲ್ಲಿ ಕಾನೂನು ಕುರುಡಾಗಿಲ್ಲ ಮತ್ತು ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆಗೆ ಅವಕಾಶವಿದೆ ಎಂಬ ಸಂದೇಶವನ್ನು ಸಾರಲು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಗ್ರಂಥಾಲಯದಲ್ಲಿ ಈ ವಿಗ್ರಹವನ್ನು ಸ್ಥಾಪಿಸಲಾಗಿದೆ.
ನ್ಯಾಯ ದೇವತೆಯ ಹೊಸ ವಿಗ್ರಹವು ಬಿಳಿ ಬಣ್ಣದಲ್ಲಿದೆ. ಭಾರತೀಯ ಉಡುಪು ಸೀರೆ ಉಟ್ಟಿರುವುದನ್ನು ತೋರಿಸಲಾಗಿದೆ. ವಿಗ್ರಹದಲ್ಲಿ ದೇವಿಯ ತಲೆಯ ಮೇಲೆ ಸುಂದರವಾದ ಕಿರೀಟ, ಅವಳ ಹಣೆಯ ಮೇಲೆ ಬಿಂದಿ, ಕಿವಿ ಮತ್ತು ಕುತ್ತಿಗೆಯಲ್ಲಿ ಸಾಂಪ್ರದಾಯಿಕ ಆಭರಣಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ದೇವಿಯು ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಸಂವಿಧಾನವನ್ನು ಹಿಡಿದಿದ್ದಾಳೆ.
ಇದನ್ನೂ ಓದಿ: ಬಿಗ್ಬಾಸ್ ಮನೆಯಲ್ಲಿ ಲೇಡೀಸ್ ಬಾತ್ರೂಮ್ ಇಣುಕಿ ನೋಡಿದ ಪುರುಷ ಸ್ಪರ್ಧಿ! ನಂತರ ನಡೆದಿದ್ದಿಷ್ಟು… Bigg Bossನೂತನ ಮೂರ್ತಿ ಸಾರಿದ ಸಂದೇಶ
ಹಳೆಯ ವಿಗ್ರಹದಲ್ಲಿ ಕಣ್ಣುಗಳಿಗೆ ಬಟ್ಟೆ ಕಟ್ಟಲಾಗಿತ್ತು. ಇದರ ಅರ್ಥ ಕಾನೂನು ಎಲ್ಲರನ್ನು ಸಮಾನವಾಗಿ ಪರಿಗಣಿಸುತ್ತದೆ ಎಂದು. ಆದರೆ, ಕೆಲವರು ಅದನ್ನು ಕಾನೂನು ಕುರುಡು ಅಂದುಕೊಂಡಿದ್ದಾರೆ. ಇನ್ನು ಆಕೆಯ ಕೈಯಲ್ಲಿದ್ದ ಖಡ್ಗವು ತಪ್ಪು ಮಾಡಿದವರನ್ನು ಶಿಕ್ಷಿಸುವ ಕಾನೂನಿನ ಶಕ್ತಿಯನ್ನು ಸಂಕೇತಿಸುತ್ತಿತ್ತು. ಹೊಸ ವಿಗ್ರಹದಲ್ಲಿ ಬದಲಾಗದ ವಿಷಯವೆಂದರೆ ತಕ್ಕಡಿ. ದೇವಿಯ ಕೈಯಲ್ಲಿರುವ ತಕ್ಕಡಿಯು ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನ್ಯಾಯಾಲಯವು ಎರಡೂ ಕಡೆಯವರ ವಾದವನ್ನು ಎಚ್ಚರಿಕೆಯಿಂದ ಆಲಿಸುತ್ತದೆ ಎಂಬುದನ್ನು ಸಂಕೇತಿಸುತ್ತದೆ. ತಕ್ಕಡಿಯು ಸಮತೋಲನದ ಸಂಕೇತವಾಗಿದೆ.
ಅಂದಹಾಗೆ ಡಿ.ವೈ. ಚಂದ್ರಚೂಡ್ ಅವರು ನವೆಂಬರ್ 8 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ, ಆ ಸ್ಥಾನಕ್ಕೆ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಹೆಸರನ್ನು ಶಿಫಾರಸು ಮಾಡಿ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಕಾನೂನು ಸಚಿವಾಲಯ ಕೋರಿದ ಹಿನ್ನೆಲೆಯಲ್ಲಿ ಚಂದ್ರಚೂಡ್ ಅವರು ಈ ಶಿಫಾರಸು ಮಾಡಿದ್ದಾರೆ. ಎರಡು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ನವೆಂಬರ್ 8 ರಂದು ನಿವೃತ್ತರಾಗಲಿದ್ದಾರೆ. (ಏಜೆನ್ಸೀಸ್)