ನ್ಯೂಸ್

ಆರದ ಜ್ವಾಲೆ: ನಟ ರಾಜ್ ತರುಣ್​ ವಿರುದ್ಧ ಮತ್ತೊಂದು ದೂರು ದಾಖಲಿಸಿದ ಲಾವಣ್ಯ!

ತೆಲಂಗಾಣ: ಇದು ಆರದ ಜ್ವಾಲೆ, ಮುಗಿಯದ ಕಥೆ! ಕಳೆದ ಒಂದು ತಿಂಗಳಿನಿಂದ ಟಾಲಿವುಡ್ ಅಂಗಳದಲ್ಲಿ ಸಿನಿಮಾ ಸುದ್ದಿಗಿಂತಲೂ ಹೆಚ್ಚು ಸದ್ದು ಮಾಡುತ್ತಿರುವುದು ಯುವ ನಟ ರಾಜ್ ತರುಣ್ ಮತ್ತು ಲಾವಣ್ಯ ಪ್ರೇಮ ವಿವಾದ. 11 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ನಲ್ಲಿದ್ದು, ಪ್ರೀತಿಸಿ, ಗುಟ್ಟಾಗಿ ಮದುವೆಯಾಗಿ ಇದೀಗ ತನಗೆ ಮೋಸ ಮಾಡಿದ್ದಾನೆ ಎಂದು ತೆಲುಗು ನಟ ರಾಜ್ ತರುಣ್ ವಿರುದ್ಧ ಗಂಭೀರ ಆರೋಪ ಹೊರಿಸಿರುವ ಪ್ರೇಯಸಿ ಲಾವಣ್ಯ, ರಾಜ್​ನಿಂದ ನನಗೆ ಅನ್ಯಾಯವಾಗಿದೆ. ಆತ ತನ್ನ ಸಹ ನಟಿಯಾದ ಮಾಳ್ವಿ ಮಲ್ಹೋತ್ರಾ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಆರೋಪಿಸಿ, ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಹೈಕೋರ್ಟ್​ ನಟನಿಗೆ ಜಾಮೀನು ನೀಡಿ, ಬಿಗ್ ರಿಲೀಫ್ ನೀಡಿತ್ತು. ಇಷ್ಟಕ್ಕೆ ಸುಮ್ಮನಾಗದ ಲಾವಣ್ಯ, ನನಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವೆ ಎಂದು ಪಟ್ಟುಹಿಡಿದಿದ್ದರು. ಇತ್ತೀಚೆಗಷ್ಟೇ ಅದಕ್ಕೆ ಪೂರಕವಾಗುವಂತೆ ಸ್ಫೋಟಕ ಸಾಕ್ಷ್ಯಗಳನ್ನು ಕೂಡ ಪೊಲೀಸರಿಗೆ ಒದಗಿಸಿದ್ದಾರೆ.

ಪ್ರೀತಿ ಹೆಸರಲ್ಲಿ ವಂಚನೆ ಪ್ರಕರಣದಡಿ ಸದ್ಯ ಕೋರ್ಟ್​ ರಾಜ್​ ತರುಣ್​ಗೆ ನಿರೀಕ್ಷಣಾ ಜಾಮೀನು ಕೊಡುವ ಮೂಲಕ ಬಿಗ್ ರಿಲೀಫ್​ ನೀಡಿದ್ದೇ ಆದರೂ ಇವರಿಬ್ಬರ ಜಟಾಪಟಿ ಎಂದಿನಂತೆ ಮುಂದುವರೆದಿದೆ. ಕೆಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ರಾಜ್​-ಲಾವಣ್ಯ ಪ್ರಕರಣ ಇದೀಗ ಜ್ವಾಲೆಯಂತೆ ಸ್ಫೋಟಗೊಂಡಿದೆ. ಇವರಿಬ್ಬರ ಪ್ರಕರಣಕ್ಕೆ ಮತ್ತೊಂದು ಶಾಕಿಂಗ್ ಟ್ವಿಸ್ಟ್​ ಎದುರಾಗಿದ್ದು, ಪ್ರಿಯಕರ ರಾಜ್ ತರುಣ್ ಮತ್ತು ನಟಿ ಮಾಳ್ವಿ ಒಂದೇ ಫ್ಲಾಟ್​ನಲ್ಲಿದ್ದಾರೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ ಎಂದು ಲಾವಣ್ಯ ಹೇಳಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ವಿಡಿಯೋ ಕೂಡ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಬೆನ್ನಲ್ಲೇ ನಟನ ವಿರುದ್ಧ ಹೊಸ ದೂರನ್ನು ದಾಖಲಿಸಿರುವ ಲಾವಣ್ಯ, ನನ್ನ ಮನೆಯಿಂದ ರಾಜ್ ಚಿನ್ನವನ್ನು ಕಳ್ಳತನ ಮಾಡಿದ್ದಾನೆ ಎಂದು ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮತ್ತೊಮ್ಮೆ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಲಾವಣ್ಯ, ನನ್ನ ಮನೆಯಲ್ಲಿದ್ದ ಚಿನ್ನ, ಮಾಂಗಲ್ಯ ಸರದ ಬೊಟ್ಟು ಸೇರಿದಂತೆ ಇತರೆ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಾನೆ. ಒಟ್ಟು 12 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಆತ ಲಪಟಾಯಿಸಿದ್ದಾನೆ ಎಂದು ಲಾವಣ್ಯ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಠಾಣೆಗೆ ಹೋಗುವ ಮುನ್ನ ಬೀರುವಿನಲ್ಲಿ ಚಿನ್ನಾಭರಣಗಳನ್ನು ಇರಿಸಿ, ಡೋರ್​ ಲಾಕ್ ಮಾಡಲಾಗಿತ್ತು. ಆದ್ರೆ, ಮನೆಯ ಕೀಗಳು ರಾಜ್ ಬಳಿಯಿತ್ತು. ರಾಜ್ ತರುಣ್ ಹಲವು ಆಭರಣ, ದಾಖಲೆಗಳನ್ನು ತೆಗೆದುಕೊಂಡು ಮುಂಬೈಗೆ ಹೋಗಿದ್ದಾನೆ ಎಂದು ಲಾವಣ್ಯ ತಿಳಿಸಿದ್ದಾರೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).