Arvind Kejriwal: ರಾಷ್ಟ್ರ ರಾಜಧಾನಿ ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸ್ಟಾಪ್ ಸೆಲೆಕ್ಷನ್ ಕಮಿಷನ್(ಎಸ್‌ಎಸ್‌ಸಿ) ಆಕಾಂಕ್ಷಿಗಳ ಮೇಲೆ ತಡರಾತ್ರಿ ದೆಹಲಿ ಪೊಲೀಸರು ಠಾಠಿ ಚಾರ್ಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ದ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ನ್ಯಾಯಕ್ಕಾಗಿ ತಿಂಗಳುಗಳಿಂದ ಹೋರಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಶನಿವಾರ ರಾತ್ರಿಯ ಕತ್ತಲೆಯಲ್ಲಿ ಭೀಕರ ದಾಳಿ ನಡೆದಿದ್ದು, ಅನೇಕರು ಗಾಯಗೊಂಡಿದ್ದಾರೆ. ಮಾಧ್ಯಮ ಸಿಬ್ಬಂದಿಯನ್ನು ಸುದ್ದಿ ವರದಿ ಮಾಡದಂತೆ ತಡೆ ಹಿಡಿದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಬಿಜೆಪಿ ಪ್ರಜಾಪ್ರಭುತ್ವವನ್ನು ಮಾತ್ರವಲ್ಲದೆ ಇಡೀ ವ್ಯವಸ್ಥೆಯನ್ನು ಅಣಕಿಸಿದೆ. ಬಿಜೆಪಿಯ ಸರ್ವಾಧಿಕಾರ, ದರೋಡೆಕೋರತನ ನೋಡಿ, ದೇಶದಲ್ಲಿ ಬಹಿರಂಗ ದರೋಡೆಕೋರತನ ನಡೆಯುತ್ತಿದೆ. ಬಿಜೆಪಿಯನ್ನು ಪ್ರಶ್ನಿಸುವವರ ವಿರುದ್ಧ ಲಾಠಿ ಚಾರ್ಜ್ ಮಾಡಿ ಅವರನ್ನು ಸುಮ್ಮನಿರಸಲಾಗುತ್ತಿದೆ. ಯಾರನ್ನಾದರೂ ಹಿಡಿದು ಜೈಲಿಗೆ ಹಾಕಬಹುದು, ಯಾವುದೇ ಕಾನೂನನ್ನು ಅವರು ಬಯಸಿದಾಗ ಬದಲಾಯಿಸಬಹುದು. ಯಾರಾದರೂ ಬಿಜೆಪಿಗೆ ಮತ ಹಾಕದಿದ್ದರೆ, ಅವರ ಮತವನ್ನು ಕಡಿತಗೊಳಿಸಲಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಈ ವಿದ್ಯಾರ್ಥಿಗಳು ಎಸ್‌ಎಸ್‌ಸಿ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದಾರೆ. ಅವರ ಧ್ವನಿಯನ್ನು ಕೇಳುವ ಬದಲು, ರಾತ್ರಿಯ ಕತ್ತಲೆಯಲ್ಲಿ ಅವರನ್ನು ಲಾಠಿಯಿಂದ ಹೊಡೆಯಲಾಯಿತು. ಊಹಿಸಿ... ನಿನ್ನೆ ಪುಸ್ತಕಗಳನ್ನು ಹಿಡಿದಿರಬೇಕಾದ ಕೈಗಳು ಈಗ ಗಾಯದ ಗುರುತುಗಳನ್ನು ಹೊಂದಿವೆ. ಮಾಧ್ಯಮ ಸಿಬ್ಬಂದಿಯನ್ನು ಸುದ್ದಿ ವರದಿ ಮಾಡುವುದನ್ನು ಸಹ ತಡೆಯಲಾಯಿತು" ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
SSC ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಸಚಿವಾಲಯಗಳು, ಇಲಾಖೆಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಲ್ಲಿನ ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತದೆ. ಜುಲೈ 24 ರಿಂದ ಆಗಸ್ಟ್ 1 ರವರೆಗೆ 142 ನಗರಗಳ 194 ಕೇಂದ್ರಗಳಲ್ಲಿ ನಡೆದ 13 ನೇ ಹಂತದ ಪರೀಕ್ಷೆಯು ಹಠಾತ್ ರದ್ದತಿ, ಸಾಫ್ಟ್‌ವೇರ್ ಕ್ರ್ಯಾಶ್‌ಗಳು, ಬಯೋಮೆಟ್ರಿಕ್ ಪರಿಶೀಲನೆ ವೈಫಲ್ಯಗಳು ಮತ್ತು ತಪ್ಪಾದ ಕೇಂದ್ರ ಹಂಚಿಕೆಗಳಿಂದ ತುಂಬಿತ್ತು. ಪರೀಕ್ಷಾ ವಿಂಡೋದಲ್ಲಿ, ಸುಮಾರು 5 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಆದರೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಅಕ್ರಮ ನಡೆದಿದೆ. ಮರು ಪರೀಕ್ಷೆ ನಡೆಸಬೇಕು, ಪ್ರಸ್ತುತ ಪರೀಕ್ಷಾ ಫಲಿತಾಂಶಗಳನ್ನು ರದ್ದುಗೊಳಿಸಬೇಕು ಮತ್ತು ಅಕ್ರಮಗಳಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. (ಏಜೆನ್ಸೀಸ್)