ನ್ಯೂಸ್

ಲ್ಯಾಂಡ್‍ ಆಗಲು ಜಾಗ ಹುಡುಕುತ್ತಿದೆ ಚಂದ್ರಯಾನ್-3 ಲ್ಯಾಂಡರ್! ಫೋಟೊ ಬಿಡುಗಡೆ ಮಾಡಿದ ಇಸ್ರೋ

ಬೆಂಗಳೂರು: ಇದೀಗ ಚಂದ್ರನನ್ನು ತಲುಪಲು ರಷ್ಯಾ ಹಾಗೂ ಭಾರತದ ನಡುವೆ ಇದ್ದ ಪೈಪೋಟಿ ಮುಗಿದು ಹೋಗಿದೆ. ರಷ್ಯಾ ತಯಾರಿಸಿದ್ದ ಲ್ಯಾಂಡರ್ ರೋವರ್, ಚಂದ್ರನ ಮೇಲೆ ಕ್ರ್ಯಾಷ್‍ ಆದ ನಂತರ ಜಗತ್ತು ತನ್ನ ಕಣ್ಣನ್ನು ಚಂದ್ರಯಾನದ ಮೇಲೆ ನೆಟ್ಟಿದೆ. ಚಂದ್ರನ ಧ್ರುವದ ಮೇಲೆ ಇಲ್ಲಿಯವರೆಗೆ ಯಾವುದೇ ಲ್ಯಾಂಡರ್ ಇಳಿದಿಲ್ಲ. ಈ ದಿಕ್ಕಿನಲ್ಲಿ ಸಾಗುತ್ತಿರುವ ಚಂದ್ರಯಾನ-3 ಲ್ಯಾಂಡರ್ ರೋವರ್ ಇದೀಗ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು ಲ್ಯಾಂಡ್‍ ಆಗಲು ಜಾಗವನ್ನು ಹುಡುಕಲು ಪ್ರಾರಂಭಿಸಿದೆ.

ಚಂದ್ರನ ಮೇಲೆ ಇಳಿಯಲೂ ವಿಶೇಷ ಕ್ಯಾಮರಾ ಕಣ್ಣು!

ಚಂದ್ರಯಾನ ಲ್ಯಾಂಡರ್‍ಅನ್ನು ಎಲ್ಲೆಂದರೆಲ್ಲಿ ಲ್ಯಾಂಡ್‍ ಮಾಡಲು ಸಾಧ್ಯವಿರುವುದಿಲ್ಲ. ಕೊರಕಲು ಅಥವಾ ಬಂಡೆಕಲ್ಲುಗಳು ಇರುವ ಪ್ರದೇಶದಲ್ಲಿ ಲ್ಯಾಂಡ್‍ ಆದಲ್ಲಿ ಉಪಕರಣಗಳು ಹಾಳಾಗುವ ಸಾಧ್ಯತೆ ಇದ್ದು ಮಿಷನ್ ಯಶಸ್ವಿ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಲ್ಯಾಂಡರ್‍ ಮಾಡ್ಯೂಲ್‍ನಲ್ಲಿ ವಿಶೇಷ ಕ್ಯಾಮರಾ ಕಣ್ಣನ್ನು ಅಳವಡಿಸಲಾಗಿದ್ದು ಇದು ಅಪಾಯಕಾರಿ ಸ್ಥಳಗಳನ್ನು ಹಾಗೂ ಸುರಕ್ಷಿತ ಸ್ಥಳಗಳನ್ನು ಗುರುತಿಸಿ ಎಲ್ಲಿ ಲ್ಯಾಂಡ್‍ ಆಗಬಹುದು ಎನ್ನುವುದಕ್ಕೆ ಸೂಕ್ತ ಮಾಹಿತಿ ನೀಡುತ್ತದೆ. ಅದನ್ನು ಇಸ್ರೋ ನಿರ್ಮಿಸಿದ್ದು LHDAC ಅಥವಾ ಲ್ಯಾಂಡರ್ ಹಾಝಾರ್ಡ್ ಡಿಟೆಕ್ಷನ್ ಹಾಗೂ ಅವಾಯ್ಡೆನ್ಸ್ ಕ್ಯಾಮರಾ ಎಂದು ಕರೆಯಲಾಗುತ್ತದೆ. ಇದೀಗ ಇಸ್ರೋ, ಈ ವಿಶೇಷ ಕ್ಯಾಮರಾ ಸೆರೆ ಹಿಡಿದ ಚಿತ್ರಗಳನ್ನು ತನ್ನ ಟ್ವಿಟರ್ ಹ್ಯಾಂಡಲ್‍ನಲ್ಲಿ ಹಂಚಿಕೊಂಡಿದೆ.