ನ್ಯೂಸ್

ರೈಲು ಬರುತ್ತಿರುವಾಗಲೇ ಹಳಿ ಮೇಲೆ ಬಿದ್ದ ಯುವತಿ: ಧುತ್ತೆಂದು ಪ್ರತ್ಯಕ್ಷನಾದ ಆಪದ್ಬಾಂಧವ!

ಮುಂಬೈ: ಇನ್ನೇನು ಕೆಲವೇ ಕ್ಷಣಗಳು ಕಳೆದು ಹೋಗಿದ್ದರೆ ಆ ಯುವತಿ ಇನ್ನಿಲ್ಲವಾಗಿರುತ್ತಿದ್ದಳು. ಏಕೆಂದರೆ ರೈಲು ಇನ್ನೇನು ಬರುತ್ತಿದೆ ಎನ್ನುತ್ತಿರುವಾಗಲೇ ಆಕೆ ತಲೆ ತಿರುಗಿ ಹಳಿ ಮೇಲೇ ಬಿದ್ದುಬಿಟ್ಟಿದ್ದಳು. ಆದರೆ ನೋಡನೋಡುತ್ತಿದ್ದಂತೆ ಧಾವಿಸಿದ ಆಪದ್ಬಾಂಧವ, ಪವಾಡಸದೃಶವೆಂಬಂತೆ ಆಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.

ರೈಲು ನಿಲ್ದಾಣವೊಂದರಲ್ಲಿ ಸಂಭವಿಸಿರುವ ಈ ಅವಘಡ ಅಲ್ಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈಗ ಹಲವರ ಗಮನ ಸೆಳೆಯುವಂತೆ ಮಾಡಿದೆ. ಮಾತ್ರವಲ್ಲ ಆಪದ್ಬಾಂಧವನಂತೆ ಧಾವಿಸಿದ ರೈಲ್ವೇ ಪೊಲೀಸ್​ ಫೋರ್ಸ್​ ಸಿಬ್ಬಂದಿ ಕುರಿತು ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಅಂದಹಾಗೆ ಮುಂಬೈನ ಸಂಧ್ರುಷ್ಟ್​ ರೋಡ್​ ರೈಲ್ವೇ ನಿಲ್ದಾಣದ, ಪ್ಲ್ಯಾಟ್​ಫಾರ್ಮ್​-2ರಲ್ಲಿ ಇಂಥದ್ದೊಂದು ಪವಾಡಸದೃಶ ಘಟನೆ ಗುರುವಾರ ಸಂಭವಿಸಿದೆ.

ಮುಂಬೈನ ಲೋಕಲ್​ ಟ್ರೇನ್​ನಲ್ಲಿ ಪ್ರಯಾಣಿಸಲು ನಿಲ್ದಾಣಕ್ಕೆ ಬಂದಿದ್ದ 23 ವರ್ಷದ ಯುವತಿ ಅನೀಷಾ ಶೇಖ್​ ಎಂಬಾಕೆ ತಲೆ ಸುತ್ತು ಬಂದು ಹಳಿ ಮೇಲೇ ಕುಸಿದು ಬಿದ್ದಿದ್ದಳು. ಆ ಸಂದರ್ಭದಲ್ಲಿ ರೈಲು ಬರುತ್ತಿದ್ದುದು ಕಾಣಿಸುತ್ತಿತ್ತು. ಯುವತಿ ಬಿದ್ದಿದ್ದು ಹಾಗೂ ರೈಲು ಆಗಮಿಸುತ್ತಿರುವುದು ಎರಡನ್ನೂ ಗಮನಿಸಿದ ರೈಲ್ವೇ ಪೊಲೀಸ್​ ಫೋರ್ಸ್​ನ ಸಿಬ್ಬಂದಿ ಶ್ಯಾಮ್​ ಸೂರತ್ ತಕ್ಷಣ ಹಳಿಯತ್ತ ಧಾವಿಸಿ ಆಕೆಯನ್ನು ಅಲ್ಲಿಂದ ಎತ್ತಿಕೊಂಡು ಬಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಪ್ರಯಾಣಿಕರು ಶ್ಯಾಮ್​ಗೆ ನೆರವಾದರೆ, ಇನ್ನು ಕೆಲವು ಪ್ರಯಾಣಿಕರು ರೈಲನ್ನು ನಿಧಾನಗೊಳಿಸುವಂತೆ ಸನ್ನೆ ಮಾಡಿದ್ದರು. ಇವೆಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಶ್ಯಾಮ್​ ಅವರ ಈ ಕಾರ್ಯವನ್ನು ಹಲವರು ಶ್ಲಾಘಿಸಿದ್ದಾರೆ. (ಏಜೆನ್ಸೀಸ್​)