ನ್ಯೂಸ್

ಕೆವಿಎನ್​ ಪ್ರೊಡಕ್ಷನ್ಸ್​ಗೆ ಯಶ್​ ಮುಂದಿನ ಚಿತ್ರ ಕನ್ಫರ್ಮ್​

ಬೆಂಗಳೂರು: ಯಶ್​ ಅಭಿನಯದ 'ಕೆಜಿಎಫ್​ 2' ಚಿತ್ರ ಬಿಡುಗಡೆಯಾಗಿ ಒಂಬತ್ತು ತಿಂಗಳುಗಳಾಗಿವೆ. ಈ ಅವಧಿಯಲ್ಲಿ ಯಶ್​ ಅಭಿನಯದ ಹೊಸ ಚಿತ್ರ ಘೋಷಣೆಯಾಗಿಲ್ಲ. ಆ ಚಿತ್ರವನ್ನು ಯಾರು ನಿರ್ಮಿಸಬಹುದು? ಎಂಬ ಪ್ರಶ್ನೆ ಅವರ ಅಭಿಮಾನಿ ವಲಯದಲ್ಲಿತ್ತು. ಆದರೆ, ಯಶ್​ ಮಾತ್ರ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ. ಈಗ ಆ ರಹಸ್ಯ ಕೊನೆಗೂ ಬಯಲಾಗಿದೆ.

ಯಶ್​ ಅಭಿನಯದ 19ನೇ ಚಿತ್ರವನ್ನು ಕೆವಿಎನ್​ ಸಂಸ್ಥೆ ನಿರ್ಮಿಸುತ್ತಿದೆ, ಇಂದು ಯಶ್​ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭದಲ್ಲಿ ಅವರ ಮುಂದಿನ ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆ ನಿರ್ಮಿಸುತ್ತಿದೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಈ ವಿಷಯವಾಗಿ ಯಶ್​ ಆಗಲೀ, ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಯಾಗಲೀ ಇನ್ನಷ್ಟೇ ಅಧಿಕೃತ ಮಾಹಿತಿ ನೀಡಬೇಕಿದೆ. ಸದ್ಯ ಯಶ್​ ತಮ್ಮ ಕುಟುಂಬದವರು ಮತ್ತು ಗೆಳೆಯರ ಜತೆಗೆ ದುಬೈನಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರು ವಾಪಸ್ಸು ಬರುತ್ತಿದ್ದಂತೆಯೇ ಈ ಕುರಿತು ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

ಇದಕ್ಕೂ ಮುನ್ನ, ಕೆಲವು ತಿಂಗಳ ಹಿಂದೆ, ಯಶ್​ ಅಭಿನಯದ ಹೊಸ ಚಿತ್ರವನ್ನು ಕೆವಿಎನ್​ ನಿರ್ಮಿಸುತ್ತಿದ್ದು, ನರ್ತನ್​ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಾರುವ ಪೋಸ್ಟರ್​​ಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ, ಕೆವಿಎನ್​ ಪ್ರೊಡಕ್ಷನ್ಸ್ ಸಂಸ್ಥೆಯವರಾಗಲೀ, ಯಶ್​ ಕಡೆಯಿಂದಾಗಲೀ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ.

ಎರಡು ದಿನಗಳ ಹಿಂದೆ ದುಬೈಗೆ ಹೊರಡುವ ಸಂದರ್ಭದಲ್ಲಿ ಯಶ್​ ಸೋಷಿಯಲ್​ ಮೀಡಿಯಾದಲ್ಲಿ ಒಂದು ಪೋಸ್ಟ್​ ಹಾಕಿದ್ದರು. 'ನಾನು ಈ ವರ್ಷದ ಹುಟ್ಟುಹಬ್ಬದಂದು ನಿಮ್ಮನ್ನ ನೋಡಬೇಕು, ನಿಮ್ಮೊಂದಿಗೆ ಸಮಯ ಕಳೆಯಬೇಕು ಅಂದುಕೊಂಡಿದ್ದೆ. ಆದರೆ, ಜಗದಗಲದ ನಿರೀಕ್ಷೆಯಲ್ಲಿರುವ ನಿಮ್ಮ ಮುಂದೆ ನಿಲ್ಲಲು ಇನ್ನೂ ಸ್ವಲ್ಪವೇ ಸ್ವಲ್ಪ ಸಮಯ ಕೊಡಿ. ನಿಮಗಾಗಿ ವಿಭಿನ್ನವಾಗಿರೋದೆನನ್ನೂ ನಿಮ್ಮ ಮುಂದೆ ತರಲು ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದೇನೆ. ಅಲ್ಲಿಯವರೆಗೂ ನಿಮ್ಮ ತಾಳ್ಮೆ ಮತ್ತು ಪ್ರೀತಿಯೇ ನನಗೆ ಈ ವರ್ಷದ ಹುಟ್ಟುಹಬ್ಬದ ನಿಮ್ಮ ಉಡುಗೊರೆ. ಕ್ಷಮಿಸಿ, ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ' ಎಂದು ಬರೆದುಕೊಂಡಿದ್ದರು.

ಆದರೆ,ಈಗ ಯಶ್​ ಅನುಪಸ್ಥಿತಿಯಲ್ಲಿ ಯಶ್​ ಅಭಿನಯದ ಹೊಸ ಚಿತ್ರವೊಂದನ್ನು ಕೆವಿಎನ್​ ನಿರ್ಮಿಸುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಯಶ್​ ಏನು ಹೇಳುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.