ನ್ಯೂಸ್

ಸಹಸ್ರ ಕೊಲೆ ಪ್ರಕರಣಕ್ಕೆ ಟ್ವಿಸ್ಟ್​! ಒಂದೇ ಒಂದು ಪತ್ರದಲ್ಲಿತ್ತು ಹತ್ಯೆ ಹಿಂದಿನ ಸಂಪೂರ್ಣ ಸಂಚು! ಫೋಟೋ ವೈರಲ್ | Sahasra Case

ಮೋಹನ್​ ಶೆಟ್ಟಿ

Kukatpally Sahasra Case: ಇತ್ತೀಚೆಗಷ್ಟೇ ಹೈದರಾಬಾದ್‌ನಲ್ಲಿ ಸಂಚಲನ ಮೂಡಿಸಿದ್ದ ಕುಕಟ್ಪಲ್ಲಿ ಮೂಲದ ಶಾಲಾ ಬಾಲಕಿಯ ಕೊಲೆ ಪ್ರಕರಣಕ್ಕೆ ಕಡೆಗೂ ತೆರೆಬಿದ್ದಿದೆ. ಈ ಹತ್ಯೆ ಮಾಡಿದವರಾರು? ವಿದ್ಯಾರ್ಥಿಯನ್ನು ಬರ್ಬರವಾಗಿ ಕೊಲೆಗೈದ ಆರೋಪಿ ಯಾರು? ಎಂಬ ಹತ್ತಾರು ಪ್ರಶ್ನೆಗಳು ಖಾಕಿ ಪಡೆಯನ್ನು ಬೆಂಬಿಡದೆ ಕಾಡುತ್ತಿತ್ತು. ಇದೀಗ ಆ ನಿಗೂಢತೆ ಬಟಾಬಯಲಾಗಿದೆ.

ಬಾಲಕಿಯನ್ನು ಹತ್ಯೆಗೈದವರು ಯಾರು? ಮತ್ತು ಕೊಲೆ ಹಿಂದಿನ ಉದ್ದೇಶವೇನು? ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಕೊಲೆಗಾರ ಪಕ್ಕದ ಮನೆಯ ಹುಡುಗ ಎಂದು ಖಾಕಿ ಸತ್ಯ ಬಿಚ್ಚಿಡುತ್ತಿದ್ದಂತೆ ಮೃತ ಬಾಲಕಿಯ ಪೋಷಕರು ಮತ್ತು ಕುಟುಂಬಸ್ಥರು ಒಂದು ನಿಮಿಷ ಬೆಚ್ಚಿಬಿದ್ದಿದ್ದಾರೆ. ಈ ವಿಷಯ ಬೆಳಕಿಗೆ ಹೊರಬರುತ್ತಿದ್ದಂತೆ ಎಸ್ಸೆಸ್ಸೆಲ್ಸಿ ಓದುತ್ತಿರುವ ಬಾಲಕನನ್ನು ಇದೀಗ ಪೊಲೀಸರು ವಶಕ್ಕೆ ಪಡೆದು, ತನಿಖೆಗೆ ಒಳಪಡಿಸಿದ್ದಾರೆ.

ಸಂಚಲನ ಹುಟ್ಟುಹಾಕಿದ ಕೇಸ್​!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಹಿರಂಗಪಡಿಸಿದ ವಿವರಗಳು ನಿಜಕ್ಕೂ ಭಾರೀ ಆಘಾತಕಾರಿ ಆಗಿದೆ. ಕೊಲೆ ಹೇಗೆ ಮಾಡಬೇಕು? ಎಂಬ ಪೂರ್ಣ ಸಂಚನ್ನು ಆತ ಕಾಗದದ ಮೇಲೆ ಬರೆದಿರುವುದು ಪೊಲೀಸರಿಗೆ ಲಭಿಸಿದೆ. ಈಗ ಆ ಫೋಟೋ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಮೃತ ಬಾಲಕಿ ಸಹಸ್ರಳ ಕುತ್ತಿಗೆ ಸೀಳಿ, ಹೊಟ್ಟೆಗೆ 18 ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ.

ಕಳ್ಳತನಕ್ಕೆ ತೆರಳಿದಾಗ ಆತ ತನ್ನೊಂದಿಗೆ ಚಾಕುವನ್ನು ತೆಗೆದುಕೊಂಡು ಹೋಗಿದ್ದಾನೆ. ಇದೇ ವೇಳೆ ಬಾಲಕಿಯ ಪೋಷಕರು ಮನೆಯಿಂದ ಹೊರಗೆ ಹೋಗಿದ್ದರು. ಬಾಲಕಿಯ ಶಾಲೆಯಲ್ಲಿ ಕ್ರೀಡಾ ಕಾರ್ಯಕ್ರಮದ ಹಿನ್ನೆಲೆ ರಜೆ ಕೊಡಲಾಗಿತ್ತು. ತನ್ನ ತಮ್ಮ ಶಾಲೆಗೆ ಹೋದರೆ, ಹೆತ್ತವರು ಕೆಲಸಕ್ಕೆ ತೆರಳಿದ್ದರು. ಈ ಸಮಯದಲ್ಲಿ ಮನೆಗೆ ನುಗ್ಗಿದ ಆರೋಪಿ, 80,000 ರೂ. ಹಣ ದರೋಡೆ ಮಾಡಿದ್ದಾನೆ. ಮನೆಯೊಳಗೆ ಯಾರೋ ಬಂದಿರುವುದನ್ನು ಗಮನಿಸಿದ ಸಹಸ್ರ, ಏಕಾಏಕಿ ಚೀರಾಡಿದ್ದಾಳೆ. ಇದರಿಂದ ಭಯಭೀತನಾದ ಹುಡುಗ, ಚಾಕುವಿನಿಂದ ಆಕೆಯ ಕತ್ತು ಸೀಳಿ, ಹೊಟ್ಟೆಗೆ ಇರಿದು ಕೊಂದಿದ್ದಾನೆ ಎಂದು ವರದಿಗಳು ಉಲ್ಲೇಖಿಸಿವೆ.

ಪತ್ರದಲ್ಲಿ ಏನಿತ್ತು?

ಆದಾಗ್ಯೂ, ಕಳ್ಳತನ ಮಾಡುವ ಮೊದಲು ಆತ ಪೂರ್ವತಯಾರಿ ಮಾಡಿಕೊಂಡು ಬಂದಿರುವುದು ಸದ್ಯ ಪೊಲೀಸರನ್ನೇ ದಿಗ್ಭ್ರಮೆಗೊಳಿಸಿದೆ. ಪತ್ರದಲ್ಲಿ, ತಾನು ಹೇಗೆ ಕದಿಯಬೇಕು? ತಪ್ಪಿಸಿಕೊಳ್ಳುವುದು ಹೇಗೆ? ಸಿಕ್ಕಿಬಿದ್ದರೆ ಏನು ಮಾಡಬೇಕು? ಎಂಬುದರ ಸಂಪೂರ್ಣ ವಿವರವನ್ನು ವೈರಲ್​ ಕಾಗದದ ಮೇಲೆ ಆತ ಬರೆದಿರುವುದು ತನಿಖೆಯಲ್ಲಿ ಬಯಲಾಗಿದೆ.

ಬಾಗಿಲು ಒಡೆಯುವುದು ಹೇಗೆ, ಬೀಗ ಮುರಿಯುವುದು ಹೇಗೆ ಮತ್ತು ಮನೆಯಿಂದ ತಪ್ಪಿಸಿಕೊಳ್ಳುವುದು ಯಾವ ರೀತಿ? ಎಂಬುದನ್ನು ಬಹಳ ಯೋಚಿಸಿ ಬರೆದಿರುವುದು ಸ್ಪಷ್ಟವಾಗಿದೆ. ಈ ಘಟನೆಯ ಬಗ್ಗೆ ಸ್ಥಳೀಯ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ನೀಡಿದ ಮಾಹಿತಿಯ ಆಧಾರದ ಮೇಲೆ ಬಾಲಕ ಓದುತ್ತಿದ್ದ ಶಾಲೆಗೆ ಹೋಗಿ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಆತನ ಮನೆಯನ್ನು ಶೋಧಿಸಿದಾಗ, ಚಾಕು ಮತ್ತು ರಕ್ತದ ಕಲೆಗಳಿರುವ ಬಟ್ಟೆಗಳು ಪತ್ತೆಯಾಗಿವೆ. ಈ ಸಾಕ್ಷ್ಯಗಳನ್ನು ವಶಪಡಿಸಿಕೊಂಡ ಖಾಕಿ ಪಡೆ, ಸದ್ಯ ಬಾಲಕನನ್ನು ಬಂಧಿಸಿದೆ,(ಏಜೆನ್ಸೀಸ್).