ನ್ಯೂಸ್

ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಆದಾಯದ ಗುರಿ ನೀಡಿದ್ದ ಅಧಿಕಾರಿಗೆ ವರ್ಗಾವಣೆಯ ಶಿಕ್ಷೆ

Mandara

ರಾಯಚೂರು/ಬೆಂಗಳೂರು: ಕೆಎಸ್ಸಾರ್ಟಿಸಿ ಆದಾಯ ವೃದ್ಧಿ ಹೆಸರಿನಲ್ಲಿ ಚಾಲಕ ಮತ್ತು ನಿರ್ವಾಹಕರಿಗೆ ಆದಾಯದ ಗುರಿ ನೀಡಿದ್ದ ಕೆ.ಆರ್. ನಗರ ಘಟಕ ವ್ಯವಸ್ಥಾಪಕ ಪಾಪ ನಾಯ್ಕ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ವರ್ಗಾವಣೆ ಮಾಡಲಾಗಿದೆ.

ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ರಾಯಚೂರಿನಲ್ಲಿ ಇಂದು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಲಾಕ್‌ಡೌನ್‌ನಿಂದ ಕೆಎಸ್ಸಾರ್ಟಿಸಿ ನಷ್ಟದಲ್ಲಿದ್ದು ಆದಾಯ ಹೆಚ್ಚಿಸಬೇಕಿರುವುದರಿಂದ ವೇಗದೂತ ಬಸ್ ಚಾಲಕರು ಮತ್ತು ನಿರ್ವಾಹಕರು ಪ್ರತಿದಿನ 9 ಸಾವಿರ ರೂ., ಸಾಮಾನ್ಯ ಬಸ್ ಚಾಲಕ ಮತ್ತು ನಿರ್ವಾಹಕರು ನಿತ್ಯ 7 ಸಾವಿರ ರೂ. ಆದಾಯ ತರಬೇಕು ಎಂದು ಈ ಅಧಿಕಾರಿ ಆದೇಶ ಹೊರಡಿಸಿದ್ದರು.

ಈ ಆದೇಶಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ಪ್ರಯಾಣಿಕರು ಬಸ್‌ಗಳಿಗೆ ಬರದಿದ್ದಾಗ, ನಾವು ಎಲ್ಲಿಂದ ಆದಾಯ ತರಬೇಕು ಎಂದು ಚಾಲಕ ಮತ್ತು ನಿರ್ವಾಹಕರು ಆಕ್ರೋಶ ವ್ಯಕ್ತಪಡಿಸಿದ್ದರು. ಜತೆಗೆ, ಮಾಧ್ಯಮಗಳಲ್ಲೂ ಈ ಸುದ್ದಿ ಬಿತ್ತರವಾಗಿತ್ತು. ಹೀಗಾಗಿ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಆದೇಶ ಹೊರಡಿಸಿದ ಮರುದಿನವೇ ಅದನ್ನು ಹಿಂಪಡೆದಿದ್ದರು. ಇದೀಗ ಅವೈಜ್ಞಾನಿಕವಾಗಿ ಆದೇಶ ಹೊರಡಿಸಿದ ಪಾಪ ನಾಯ್ಕ ಅವರನ್ನು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಆಡಳಿತಾತ್ಮಕ ಕಾರಣ ನೀಡಿ ವರ್ಗಾವಣೆ ಮಾಡಿದೆ.

ಹೊರರಾಜ್ಯದ ಹಸಿರು ವಲಯಗಳಿಗೆ ಮಾತ್ರ ರಾಜ್ಯದಿಂದ ಬಸ್ ಸಂಚಾರ ಆರಂಭಿಸಲಾಗುವುದು. ಬಸ್ ಸಂಚಾರ ಕುರಿತಾಗಿ ತೆಲಂಗಾಣ, ಗೋವಾ, ಆಂಧ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಒಪ್ಪಿಗೆ ಸಿಕ್ಕ ನಂತರ ಆರಂಭಿಸಲಾಗುವುದು. ಕೆಂಪು ವಲಯ, ಅದರಲ್ಲೂ ಮಹಾರಾಷ್ಟ್ರಕ್ಕೆ ಬಸ್ ಸಂಚಾರವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.