ಪಣಜಿ: ಭಾರತದ 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಖ್ಯಾತ ಬಾಲಿವುಡ್ ನಟಿ ಕೃತಿ ಸನೋನ್(Kriti Sanon) ಸಿನಿಮಾ ಜಗತ್ತಿನಲ್ಲಿನ ನೆಪೊಟಿಸಮ್ ಕುರಿತು ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಹೊರಗಿನವರು ಎದುರಿಸುತ್ತಿರುವ ಹೋರಾಟಗಳು ಮತ್ತು ಸ್ವಜನಪಕ್ಷಪಾತ ಚರ್ಚೆಗೆ 'ಮಾಧ್ಯಮ' ಮತ್ತು 'ಪ್ರೇಕ್ಷಕರ' ಕೊಡುಗೆಯ ಬಗ್ಗೆ ಅವರು ಮಾತನಾಡಿದರು. ಸಿನಿಮಾ ಹಿನ್ನೆಲೆ ಇಲ್ಲದ ಬಂದ ವ್ಯಕ್ತಿಗೆ ತನ್ನ ಕನಸುಗಳ ಅವಕಾಶಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ನಾನು ಇಲ್ಲಿಗೆ(ಬಾಲಿವುಡ್) ಬಂದಾಗಿನಿಂದ ಇಂಡಸ್ಟ್ರಿ ನನ್ನನ್ನು ತುಂಬಾ ಆತ್ಮೀಯವಾಗಿ ಸ್ವಾಗತಿಸುತ್ತಿದೆ ಎಂದು ಹೇಳಿದ ಕೃತಿ, ನೀವು ಚಿತ್ರರಂಗದ ಹಿನ್ನೆಲೆಯಿಂದ ಬಂದವರಲ್ಲದಿದ್ದರೂ ಕನಸನ್ನು ನನಸು ಮಾಡಿಕೊಳ್ಳಲು ಸಮಯ ಹಿಡಿಯುತ್ತದೆ. ಆ ಅವಕಾಶಗಳು ಸಿಗಲು ಸಮಯ ಬೇಕು. ನಿಮಗೆ ಬೇಕಾದ ಮ್ಯಾಗಜೀನ್ ಕವರ್‌ಗಳನ್ನು ಪಡೆಯಲು ಸಮಯ ತೆಗೆದುಕೊಳ್ಳುತ್ತದೆ. ಆದರೆ 2-3 ಚಲನಚಿತ್ರಗಳ ನಂತರ ನೀವು ಕಷ್ಟಪಟ್ಟು ಯಾವುದಾದರೂ ಕೆಲಸ ಮಾಡುತ್ತಿದ್ದರೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನೆಪೊಟಿಸಮ್ಗೆ ಬಾಲಿವುಡ್ ಇಂಡಸ್ಟ್ರಿಯೇ ಜವಾಬ್ದಾರರಲ್ಲ ಎಂದು ಕೃತಿ ಸನೋನ್ ಹೇಳಿದ್ದಾರೆ. ಸ್ಟಾರ್ ಮಕ್ಕಳನ್ನು ಉತ್ತೇಜಿಸುವಲ್ಲಿ ಪ್ರೇಕ್ಷಕರು ಮತ್ತು ಮಾಧ್ಯಮಗಳು ಪಾತ್ರವಹಿಸುತ್ತವೆ ಎಂದು ತಿಳಿಸಿದರು. ನನ್ನ ಪ್ರಕಾರ ಸ್ವಜನಪಕ್ಷಪಾತಕ್ಕೆ ಉದ್ಯಮವು ಅಷ್ಟು ಜವಾಬ್ದಾರರಲ್ಲ. ಇದಕ್ಕೆ ಮಾಧ್ಯಮಗಳು ಮತ್ತು ಪ್ರೇಕ್ಷಕರು ಸಹ ಜವಾಬ್ದಾರರು. ಕೆಲವು ಸ್ಟಾರ್ ಕಿಡ್‌ಗಳ ಬಗ್ಗೆ ಮಾಧ್ಯಮಗಳು ಏನು ತೋರಿಸುತ್ತಿವೆ ಎಂಬುದನ್ನು ಪ್ರೇಕ್ಷಕರು ನೋಡಲು ಬಯಸುತ್ತಾರೆ. ಏಕೆಂದರೆ ಪ್ರೇಕ್ಷಕರು ಅವರ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹಾಗಾಗಿ ಅವರ ಜತೆ ಸಿನಿಮಾ ಮಾಡಬೇಕು ಎಂದು ಇಂಡಸ್ಟ್ರಿ ಭಾವಿಸುತ್ತದೆ.
ಆದರೆ ನೀವು ಪ್ರತಿಭಾವಂತರಾಗಿದ್ದರೆ ನೀವು ನಿಮ್ಮ ಕನಸಿನ ಜಾಗಕ್ಕೆ ಬರುತ್ತೀರಿ ಎಂದು ನಾನು ಭಾವಿಸುತ್ತೇನೆ ಮತ್ತು ನಿಮ್ಮ ಪ್ರೇಕ್ಷಕರೊಂದಿಗೆ ನೀವು ಸಂಪರ್ಕವನ್ನು ಹೊಂದಿಲ್ಲದಿದ್ದರೆ ಕನಸು ನನಸು ಮಾಡಿಕೊಳ್ಳುವುದು ಕಷ್ಟ ಎಂದು ಹೇಳಿದ್ದಾರೆ. ಕೃತಿ ಸನೋನ್ ಕೊನೆಯದಾಗಿ ಕಾಜೋಲ್ ಮತ್ತು ಶಾಹೀರ್ ಶೇಖ್ ನಟನೆಯ ದೋ ಪಟ್ಟಿಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡರು. ಮುಂದೆ ಅಕ್ಷಯ್ ಕುಮಾರ್ ಅವರ ಮಲ್ಟಿ-ಸ್ಟಾರರ್ ಹೌಸ್‌ಫುಲ್ 5 ಮತ್ತು ವರುಣ್ ಧವನ್-ಸ್ಟಾರರ್ ಭೇದಿಯಾ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.(ಏಜೆನ್ಸೀಸ್)