ನ್ಯೂಸ್

ವಿದೇಶಕ್ಕೆ ಹೋಗಲು ಅಪ್ಪನಿಗೆ 30 ಲಕ್ಷ ರೂ. ಪಂಗನಾಮ ಹಾಕಿದ ಪುತ್ರಿ; ಮುಂದೇನಾಯ್ತು?

ಜೈಪುರ: ವಿದ್ಯಾರ್ಥಿಗಳು ಮನೆಯಲ್ಲಿ ಖರ್ಚಿಗೆ ದುಡ್ಡು ಬೇಕು ಎಂದರೆ ಪೋಷಕರು ತಕ್ಷಣಕ್ಕೆ ಕೊಡುವುದಿಲ್ಲ. ಅದರ ಬದಲಾಗಿ ಇಲ್ಲದೇ ಇರುವ ಸಬೂಬು ಹೇಳಿ  ನೂರಿನ್ನೂರು ರೂಪಾಯಿ ಪಡೆದುಕೊಂಡು ಹೋಗಿ ಬಹುತೇಕ ಜನ ಮಜಾ ಮಾಡಿರುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಪೋಷಕರಿಂದ ಹಣ ಕೀಳಲು ಮುಂದಾಗಿ ತನ್ನ ಚಾಲಾಕಿತನದಿಂದಲೇ ಪೊಲೀಸರ ಅತಿಥಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚಿಗೆ ರಾಜಸ್ಥಾನದ ಕೋಟಾದಲ್ಲಿ ನಡೆದಿದ್ದ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಯುವತಿಯೊಬ್ಬಳು 30 ಲಕ್ಷ ರೂಪಾಯಿಗಾಗಿ ತನ್ನನ್ನು ಕಿಡ್ನ್ಯಾಪ್‌ ಮಾಡಿದ್ದಾರೆ ಎಂದು ಅಪ್ಪನಿಗೆ ಸುಳ್ಳು ಹೇಳಿ ನಾಟಕವಾಡಿರುವುದು ಪೊಲೀಸ್​ ತನಿಖೆಯಲ್ಲಿ ಬಯಲಾಗಿದೆ.

ಕಾವ್ಯಾ ಧಾಕಡ್‌ ಎಂಬ 21 ವರ್ಷದ ಯುವತಿಯು ತನ್ನ ಸ್ನೇಹಿತರ​ ಜೊತೆಗೆ ವಿದೇಶಕ್ಕೆ ತೆರಳಲು ತಂದೆ ಬಳಿ ಕಿಡ್ನ್ಯಾಪ್‌ ಕತೆ ಕಟ್ಟಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಯುವತಿಯು ಕೈಕಾಲು ಕಟ್ಟಿದ ಫೊಟೊಗಳನ್ನು ತನ್ನ ತಂದೆಗೆ ಕಳುಹಿಸಿದ್ದಾಳೆ. ನನ್ನನ್ನು ಯಾರೋ ಅಪಹರಿಸಿದ್ದಾರೆ. ಬಿಡುಗಡೆ ಮಾಡಬೇಕು ಎಂದರೆ 30 ಲಕ್ಷ ರೂಪಾಯಿ ಕೇಳುತ್ತಿದ್ದಾರೆ. ದಯಮಾಡಿ ದುಡ್ಡು ಕೊಟ್ಟು, ನನ್ನನ್ನು ಬಿಡಿಸಿಕೊಂಡು ಹೋಗಿ ಅಪ್ಪಾ ಎಂದು ಹೇಳಿದ್ದಾಳೆ.

ಮಗಳ ಫೋಟೋ ಹಾಗೂ ವಿಡಿಯೋವನ್ನು ನೋಡಿದ ತಂದೆ ಇದನ್ನು ನಂಬಿದ ಮಾರ್ಚ್‌ 18ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸಿದಾಗ ಯುವತಿಯ ಕಳ್ಳಾಟ ಬಯಲಾಗಿದ್ದು, ದುಡ್ಡಿಗಾಗಿ ಮಗಳು ನಾಟಕವಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ನೀಟ್‌ ಅಭ್ಯರ್ಥಿಯಾಗಿರುವ ಯುವತಿಯನ್ನು 2023ರ ಆಗಸ್ಟ್‌ನಲ್ಲಿ ಆಕೆಯ ತಂದೆಯು ರಾಜಸ್ಥಾನದ ಕೋಟಾ ನಗರದಲ್ಲಿರುವ ಕೋಚಿಂಗ್‌ ಸೆಂಟರ್‌ಗೆ ಸೇರಿಸಿದ್ದಾರೆ 2023ರ ಆಗಸ್ಟ್‌ 3ರಂದು ಕಾವ್ಯಾ ಕೋಟಾದಲ್ಲಿರುವ ಕೋಚಿಂಗ್‌ ಸೆಂಟರ್‌ ಪ್ರವೇಶಿಸಿದ್ದಾಳೆ. ಆಗಸ್ಟ್‌ 5ರವರೆಗೆ ಮಾತ್ರ ಆಕೆ ಕೋಚಿಂಗ್‌ ಸೆಂಟರ್‌ನಲ್ಲಿದ್ದು, ಇದಾದ ಬಳಿಕ ಆಕೆ ಇಂದೋರ್‌ನಲ್ಲಿ ಫ್ರೆಂಡ್ಸ್‌ ಜತೆ ನೆಲೆಸಿದ್ದಾಳೆ.

ಆಕೆಯ ತಂದೆಯು ಮಗಳು ಕೋಟಾದಲ್ಲಿಯೇ ಅಧ್ಯಯನ ಮಾಡುತ್ತಿದ್ದಾಳೆ ಎಂದು ತಿಳಿದು ಪ್ರತಿ ತಿಂಗಳು ದುಡ್ಡು ಕಳುಹಿಸಿದ್ದಾರೆ. ಇನ್ನು ಕಾವ್ಯಾಳಿಗೆ ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂಬ ಆಸೆ ಇದ್ದು, ಇದಕ್ಕಾಗಿ ಆಕೆ ಕಿಡ್ನ್ಯಾಪ್‌ ಕತೆ ಕಟ್ಟಿದ್ದಾಳೆ ಎಂಬ ವಿಚಾರ ಪೊಲೀಸ್​ ವಿಚಾರಣೆ ವೇಳೆ ಆಕೆಯೇ ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.