ನ್ಯೂಸ್

ಕೂಸಿನ ಮನೆಗೆ ಸವಾಲು: ಅಂಗನವಾಡಿಗಳಿಗೆ ಬರೆ, ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಹೊರೆ

Ravikanth Kundapura

| ವಿಲಾಸ ಮೇಲಗಿರಿ ಬೆಂಗಳೂರು

ನರೇಗಾದಡಿ ದುಡಿಯುವ ಮಹಿಳೆಯರಿಗೆ ನೆರವಾಗಲು ಸರ್ಕಾರ ಕೂಸಿನ ಮನೆ ಯೋಜನೆ ಆರಂಭಿಸುತ್ತಿದೆ. ಆದರೆ ಇವುಗಳನ್ನು ಸಾಂಸ್ಥೀಕರಣಗೊಳಿಸಲು ಹೊರಟಿದ್ದು, ಅನೇಕ ಎಡರು ತೊಡರುಗಳನ್ನು ಮೈಮೇಲೆ ಎಳೆದುಕೊಂಡಿದೆ. ಮಹಿಳೆಯರಿಗೆ ನರೇಗಾ ಅಡಿ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು, ದುಡಿಯುವ ಮಹಿಳೆಯರು ನೆಮ್ಮದಿಯಿಂದ ಕೆಲಸ ಮಾಡಲು ಹಾಗೂ ಅವರ ಮಕ್ಕಳಿಗೆ ಸುರಕ್ಷತೆ, ಪೂರಕ ಪೌಷ್ಟಿಕ ಆಹಾರ ಸೌಲಭ್ಯ ಒದಗಿಸಲು ಉದ್ಯೋಗ ಕಾರ್ಡ್ ಹೊಂದಿರುವ ಕುಟುಂಬದ 3 ವರ್ಷದ ಒಳಗಿನ ಮಕ್ಕಳಿಗೆ ಕೂಸಿನ ಮನೆ ಹೆಸರಿನಲ್ಲಿ ಶಿಶುಪಾಲನಾ ಕೇಂದ್ರ ಆರಂಭಿಸಲಾಗುತ್ತಿದೆ. ನರೇಗಾದಡಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿರುವ ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಳು ತಲೆ ಎತ್ತಲಿವೆ. ಒಟ್ಟು 4017 ಕೂಸಿನ ಮನೆ ಸ್ಥಾಪಿಸುವ ಗುರಿ ಹೊಂದಲಾಗಿದ್ದು, ಈಗಾಗಲೆ 1400 ಕೂಸಿನ ಮನೆಗಳನ್ನು ಗುರುತಿಸಲಾಗಿದೆ. 2617 ಕೂಸಿನ ಮನೆಗಳನ್ನು ಗುರುತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.

ಗ್ರಾಮ ಪಂಚಾಯಿತಿಗೆ ಒಂದರಂತೆ ಈ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, ಸಾಮೂಹಿಕ ಕಾಮಗಾರಿ ನಡೆಯುವಾಗ ಮಾತ್ರ ಈ ಕೇಂದ್ರಗಳಲ್ಲಿ ಮಕ್ಕಳ ಕೇರ್ ಟೇಕರ್ಸ್​ಗಳಿಗೆ ನರೇಗಾ ಅನುದಾನದಲ್ಲಿ ಕೂಲಿ ನೀಡಲಾಗುತ್ತದೆ. ಸಾಮೂಹಿಕ ಕಾಮಗಾರಿ ನಡೆಯದ ದಿನಗಳಲ್ಲಿ ಕೇರ್ ಟೇಕರ್ಸ್​ಗಳಿಗೆ ಗ್ರಾಮ ಪಂಚಾಯಿತಿಗಳು ಇಲಾಖೆಯಿಂದ ಪಂಚಾಯಿತಿ ಗಳಿಗೆ ನೀಡಿರುವ ಅನುದಾನದಲ್ಲಿ ನರೇಗಾ ಯೋಜನೆಯ ದಿನಗೂಲಿ ದರದಂತೆ ಕೂಲಿ ಪಾವತಿಸಬೇಕಿದೆ. ಆದರೆ ಇದಕ್ಕೆ ಅಂಗನವಾಡಿ ನೌಕರರ ಸಂಘದಿಂದ ವಿರೋಧ ವ್ಯಕ್ತವಾಗಿದೆ.

ಹೋರಾಡುವ ಸಂಭವ: ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ 10 ಮಹಿಳೆಯರಿಗೆ ಕೇರ್ ಟೇಕರ್ಸ್ ತರಬೇತಿ ನೀಡುವುದರಿಂದ ಆಶಾ ಕಾರ್ಯಕರ್ತೆಯರ ರೀತಿ ಅವರೂ ಒಂದು ಸಂಘಟನೆಯಾಗಿ ಬೆಳೆಯಲು ಅವಕಾಶವಾಗುತ್ತದೆ. ಹೀಗೆ ಹುಟ್ಟುವ ಸಂಘಟನೆಗಳು ನಾನಾ ಬೇಡಿಕೆಗಳನ್ನು ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟಕ್ಕಿಳಿಯು ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ.

ಹುಡುಗಾಟಿಕೆ ಅಲ್ಲ: ಕೂಸಿನ ಮನೆಯಿಂದ ಅಂಗನವಾಡಿ ಕೇಂದ್ರಗಳಿಗೂ ಆತಂಕ ಎದುರಾಗಿದೆ. ತಾತ್ಕಾಲಿಕವಾಗಿ ಸ್ಥಾಪಿಸಬೇಕಾದ ಕೇಂದ್ರಗಳನ್ನು ಶಾಶ್ವತ ರೂಪದಲ್ಲಿ ಸ್ಥಾಪಿಸುವುದರಿಂದ ನಿರ್ವಹಣಾ ಹೊಣೆ ಜತೆಗೆ ಆರ್ಥಿಕ ಹೊರೆ ಕೂಡ ಸರ್ಕಾರದ ಮೇಲೆ ಬೀಳುತ್ತದೆ. ಚಿಕ್ಕಮಕ್ಕಳನ್ನು ಸಾಕಿ ಸಲುಹುವುದು ಹುಡುಗಾಟಿಕೆ ಮಾತೇನೂ ಅಲ್ಲ, ಕೇವಲ 10 ದಿನ ತರಬೇತಿ ಪಡೆದ ಕೇರ್​ಟೇಕರ್ಸ್ ಈ ಹೊಣೆಯನ್ನು ಹೊರ ಬಲ್ಲರೆ ಎಂಬುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸರ್ಕಾರ ಬದಲಾದಾಗ ಸವಾಲು: ಸರ್ಕಾರ ಬದಲಾದಾಗ ಆದ್ಯತೆಗಳು ಬದಲಾಗುತ್ತವೆ. ಹಿಂದಿನ ಸರ್ಕಾರಗಳು ಮಾಡಿದ ಕಾರ್ಯಕ್ರಮಗಳ ಮುಂದುವರಿಕೆಗೆ ಅಷ್ಟಾಗಿ ಆಸಕ್ತಿ ತೋರುವುದಿಲ್ಲ. ಹಾಗಾಗಿ ಅವುಗಳ ನಿರ್ವಹಣೆ ಮುಂದಿನ ದಿನಗಳಲ್ಲಿ ಸವಾಲಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.

ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಇಳಿಕೆ: ಶಿಕ್ಷಣ ಇಲಾಖೆ ಈಗಾಗಲೇ ಪೂರ್ವ ಪ್ರಾಥಮಿಕ ಶಿಕ್ಷಣ ನಡೆಸುವುದರಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ 3 ರಿಂದ 6 ವರ್ಷದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 2021-22ರಲ್ಲಿ 19,10,040 ಇದ್ದ ಮಕ್ಕಳ ಸಂಖ್ಯೆ 2022-23ರ ವೇಳೆಗೆ 16,98,383ಕ್ಕೆ ಇಳಿಕೆಯಾಗಿದೆ. ಒಂದೇ ಶೈಕ್ಷಣಿಕ ವರ್ಷದಲ್ಲಿ ಸುಮಾರು 4 ಲಕ್ಷ ಮಕ್ಕಳು ಕಡಿಮೆಯಾಗಿದ್ದಾರೆ.

ಗ್ರಾಪಂಗೆ ಮತ್ತಷ್ಟು ಹೊರೆ: ಗ್ರಾಪಂ ಅಧ್ಯಕ್ಷರು, ಸದಸ್ಯರನ್ನು ಒಳಗೊಂಡಂತೆ 11 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಕೇರ್ ಟೇಕರ್ಸ್​ಗೆ ತರಬೇತಿ ನೀಡಿದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು, ಸ್ಥಳೀಯ ಆಹಾರ ಪದ್ಧತಿ ಆಧರಿಸಿ ಅಗತ್ಯ ಆಹಾರ ಪಟ್ಟಿ ಸಿದ್ಧಪಡಿಸುವುದು, ಪ್ರತಿ ತಿಂಗಳು ಸಭೆ ಸೇರಿ ಕೇಂದ್ರದ ಕಾರ್ಯವೈಖರಿ ಪರಾಮಶಿಸುವ ಹೆಚ್ಚುವರಿ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳು ಹೊರಬೇಕಿದೆ. ಜತೆಗೆ ಗ್ರಾಮ ಪಂಚಾಯಿತಿ ನಿಧಿ, 15ನೇ ಹಣಕಾಸು ಯೋಜನೆಯ ಅನಿರ್ಬಂಧಿತ ಅನುದಾನವನ್ನೂ ಈ ಕಾರ್ಯಕ್ಕೆ ವಿನಿಯೋಗಿಸಬೇಕಿದೆ. ಇದರಿಂದ ಗ್ರಾಪಂಗಳಿಗೆ ಆರ್ಥಿಕ ಹೊರೆಯಾಗಲಿದೆ.

ಸ್ಥಳೀಯ ಆಡಳಿತಕ್ಕೆ ಪೆಟ್ಟು: ರಾಜ್ಯ ಸರ್ಕಾರ ನೇರವಾಗಿ ಮೇಲಿನಿಂದಲೇ ವಿವಿಧ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲು ಆದೇಶಿಸುತ್ತಿರುವುದರಿಂದ ಸ್ಥಳೀಯ ಆಡಳಿತದ ಮೇಲೆ ಸವಾರಿ ಮಾಡಿದಂತಾಗುತ್ತದೆ. ಜತೆಗೆ ತಮ್ಮ ಅವಶ್ಯಕತೆಗಳಿಗೆ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಿದೆ ಎಂಬುದು ಗ್ರಾಪಂ ಚುನಾಯಿತ ಪ್ರತಿನಿಧಿಗಳ ಅಳಲು.

ನರೇಗಾ ಯೋಜನೆಯಡಿ ಕೂಸಿನ ಮನೆ ಪ್ರಾರಂಭಿಸುವುದು ಅಪ್ರಾಯೋಗಿಕ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಐಸಿಡಿಎಸ್ ಉದ್ದೇಶಕ್ಕೆ ಮಾರಕ. ಚಿಕ್ಕಮಕ್ಕಳನ್ನು ನೋಡಿಕೊಳ್ಳಲು ಪರಿಣಿತರು ಬೇಕು. ಆದರೆ 10 ದಿನ ತರಬೇತಿ ನೀಡಿ ಮಕ್ಕಳ ನಿರ್ವಹಣಾ ಹೊಣೆ ನೀಡಿದರೆ ಹೇಗೆ? | ಎಸ್.ವರಲಕ್ಷ್ಮಿ, ಅಧ್ಯಕ್ಷೆ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ.

ಕೂಸು ಕರೆ ತರುವುದು ಹೇಗೆ?

ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿ ಸಾಮಾನ್ಯವಾಗಿ 12-15 ಕಿ.ಮೀ. ಇರುತ್ತದೆ. ಆದರೆ ಬೇರೆ ಬೇರೆ ಗ್ರಾಮಗಳಲ್ಲಿ ಕಾಮಗಾರಿ ನಡೆದಾಗ ಆ ಮಕ್ಕಳನ್ನು ಕೂಸಿನ ಮನೆಗೆ ಕರೆ ತರುವುದು ವಾಪಸ್ಸು ಕಳುಹಿಸುವುದು ಹೇಗೆ?. ಹಾಲುಣಿಸಬೇಕಾದ ಕೂಸಾದರೆ ನಿರ್ವಹಣೆ ಹೇಗೆ? ಎಂಬ ಪ್ರಶ್ನೆಗಳು ಕಾಡುತ್ತಿವೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ಹಾಕಿದರೆ ನಿರ್ವಹಣೆ ಸುಲಭವಾಗುತ್ತದೆ. ಅದರ ಬದಲು ಗ್ರಾಪಂಗೆ ಒಂದು ಕಟ್ಟಡ ಗುರುತಿಸಿ, ಮೂಲಸವಲತ್ತು ಕಲ್ಪಿಸಿ, ಕೇರ್ ಟೇಕರ್ ನೇಮಿಸಿದರೂ ಅವುಗಳ ಮೇಲ್ವಿಚಾರಣೆಯನ್ನು ಅಂಗನವಾಡಿ ಕೇಂದ್ರಗಳೇ ನೋಡಿಕೊಳ್ಳಬೇಕಿದೆ. ಅದರ ಬದಲು ಆಯಾ ಗ್ರಾಮಗಳಲ್ಲಿರುವ ಅಂಗನವಾಡಿ ಕೇಂದ್ರಗಳಿಗೇ ಮಕ್ಕಳನ್ನು ಬಿಡಬಹುದು. ಈಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯ ಬಾಹುಳ್ಯವಿದ್ದರೆ ಸಾಮೂಹಿಕ ಕಾಮಗಾರಿ ನಡೆಯುವ ದಿನಗಳಂದು ಮಾತ್ರ ಕೇರ್ ಟೇಕರ್ ನೇಮಿಸಿ ಕೂಲಿ ಕೊಡಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.