ನ್ಯೂಸ್

ಭಾರತದಲ್ಲಿ 500ಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಈ ಚಪ್ಪಲಿಗೆ ಇಟಲಿಯ ದರ ಕೇಳಿದ್ರೆ ಬೆರಗಾಗ್ತೀರಾ! Kolhapuri chappals

Kolhapuri chappals : ಕೊಲ್ಹಾಪುರಿ ಚಪ್ಪಲಿಗಳು ಧರಿಸಲು ತುಂಬಾ ಆರಾಮದಾಯಕವಾಗಿವೆ. ನೋಡಲು ಶ್ರೀಮಂತಿಕೆಯಿಂದ ಕಾಣುವ ಈ ಚಪ್ಪಲಿಗಳು ರಾಜಮನೆತನದ ಉಡುಗೆ ಧರಿಸಿದಂತೆ ಕಾಣುತ್ತವೆ. ನಮ್ಮ ದೇಶದಲ್ಲಿ ಈ ಚಪ್ಪಲಿಗಳಿಗೆ ಸಾಕಷ್ಟು ಬೇಡಿಕೆಯಿದೆ.

ಮಹಾರಾಷ್ಟ್ರದಲ್ಲಿ ತಯಾರಿಸುವ ಈ ಕೊಲ್ಹಾಪುರಿ ಚಪ್ಪಲಿಗಳು ಇದೀಗ ಬಿಸಿ ವಿಷಯವಾಗಿದೆ. ಏಕೆಂದರೆ, ನಮ್ಮ ದೇಶದಲ್ಲಿ 500 ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಮಾರಾಟವಾಗುವ ಈ ಚಪ್ಪಲಿಗಳನ್ನು ಇಟಲಿಯಲ್ಲಿ 1.2 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಅಚ್ಚರಿಯಾದರೂ ಇದೇ ಸತ್ಯ.

ಇಟಲಿಯ ಮಿಲನ್‌ನಲ್ಲಿ ನಡೆದ 2026ರ ವಸಂತ/ಬೇಸಿಗೆ ಪುರುಷರ ಉಡುಪು ಪ್ರದರ್ಶನದಲ್ಲಿ ಭಾರತದ ಸಾಂಪ್ರದಾಯಿಕ ಕೊಲ್ಹಾಪುರಿ ಚಪ್ಪಲಿಗಳನ್ನೇ ಹೋಲುವ ಚಪ್ಪಲಿಗಳ ಸಾಲನ್ನು ಬಿಡುಗಡೆ ಮಾಡಿದ ನಂತರ, ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಪ್ರಾಡಾ ಟೀಕೆಗೆ ಗುರಿಯಾಗಿದೆ.

ಇಟಲಿ ಮೂಲದ ಫ್ಯಾಷನ್ ಬ್ರ್ಯಾಂಡ್ ಪ್ರಾಡಾ ತಮ್ಮ ಇತ್ತೀಚಿನ ಸಂಗ್ರಹದಲ್ಲಿ ಚರ್ಮದಿಂದ ತಯಾರಿಸುವ ಈ ಚಪ್ಪಲಿಗಳನ್ನು ಸೇರಿಸಿದೆ. ಆದರೆ, ಅವುಗಳ ಸಾಂಸ್ಕೃತಿಕ ಮಹತ್ವ ಅಥವಾ ಮೂಲದ ಸ್ಥಳದ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಆದರೆ, ಫ್ಯಾಷನ್​ ಶೋನಲ್ಲಿ ಚಪ್ಪಲಿಯನ್ನು ನೋಡಿದ ಭಾರತೀಯರು ಕೊಲ್ಹಾಪುರಿ ಚಪ್ಪಲಿಯ ವಾಸ್ತವ ಪ್ರತಿಕೃತಿ ಎಂಬುದನ್ನು ಬೇಗನೆ ಗುರುತಿಸಿದ್ದಾರೆ. ಇದು ಶತಮಾನದ ಹಿಂದಿನ ಮತ್ತು ಮಹಾರಾಷ್ಟ್ರಕ್ಕೆ ಸ್ಥಳೀಯವಾದ ಪಾದರಕ್ಷೆಗಳ ವಿನ್ಯಾಸವಾಗಿದೆ.

ಭಾರತೀಯರ ಆಕ್ರೋಶ

ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ಪ್ರಾಡಾ ಕಂಪನಿ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಮನ್ನಣೆ ನೀಡಬೇಕಾದ ಕಡೆ ಮನ್ನಣೆ ನೀಡದಿದ್ದಕ್ಕಾಗಿ ತೀವ್ರವಾಗಿ ಖಂಡಿಸಿದ್ದಾರೆ. ಹೆಚ್ಚಿನವರು ಪ್ರಾಡಾ ಕಂಪನಿ ಬ್ರ್ಯಾಂಡ್ ಸಾಂಸ್ಕೃತಿಕ ಸ್ವಾಧೀನಪಡಿಸಿಕೊಳ್ಳುವಿಕೆ ಮತ್ತು ಸ್ಥಳೀಯ ಕೃತಿಗಳನ್ನು ಅನುಮತಿ ಇಲ್ಲದೆ ತೆಗೆದುಕೊಂಡು ಅದನ್ನು ಉನ್ನತ ಮಟ್ಟದ ಫ್ಯಾಷನ್ ಎಂದು ಯಾವುದೇ ಕ್ರೆಡಿಟ್​ ಮತ್ತು ಪರಿಹಾರವಿಲ್ಲದೆ ಮಾರಾಟ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇನ್ನು ಕೆಲವರು ಇದನ್ನು ಸಾಂಸ್ಕೃತಿಕ ಕಳ್ಳತನ ಎಂದು ಜರಿದಿದ್ದಾರೆ.

ಕೊಲ್ಹಾಪುರಿ ಚಪ್ಪಲ್‌ಗಳ ಪರಂಪರೆ

ಕೊಲ್ಹಾಪುರಿ ಚಪ್ಪಲಿಗಳು ಕೇವಲ ಚಪ್ಪಲಿಗಳಲ್ಲ, ಅವು ಭಾರತದ ಶ್ರೀಮಂತ ಕುಶಲಕರ್ಮಿಗಳ ಪರಂಪರೆಯ ಸಾಕಾರವಾಗಿದೆ. ಸಂಸ್ಕರಿಸಿದ ಚರ್ಮದಿಂದ ತಯಾರಿಸಲ್ಪಟ್ಟ ಮತ್ತು ಸಾಂಪ್ರದಾಯಿಕವಾಗಿ ಕೈಯಿಂದ ನೇಯ್ದ ಈ ಸ್ಯಾಂಡಲ್‌ಗಳು 2019ರಲ್ಲಿ ಭೌಗೋಳಿಕ ಸೂಚನೆ (GI) ಟ್ಯಾಗ್ ಸ್ಥಾನಮಾನವನ್ನು ಪಡೆದಿವೆ. ಈ ಮೂಲಕ ತಮ್ಮ ಸಾಂಸ್ಕೃತಿಕ ಗುರುತನ್ನು ಭದ್ರಪಡಿಸಿಕೊಂಡವೆ. ತಮ್ಮ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದ್ದರೂ, ಈ ವಸ್ತುಗಳನ್ನು ರಚಿಸುವ ಜನರು ಮನ್ನಣೆ ಅಥವಾ ಪರಿಹಾರ ಪಡೆಯುವುದು ತುಂಬಾ ವಿರಳವಾಗಿದೆ. (ಏಜೆನ್ಸೀಸ್​)