ನ್ಯೂಸ್

ಅಮೀರ್​ಖಾನ್​ ಮಗನ ಜತೆ ಖುಷಿ ಕಪೂರ್​ ರೊಮ್ಯಾನ್ಸ್​​; ಈ ಕುರಿತು ಜಾಹ್ನವಿ ಕಪೂರ್​​ ಹೇಳಿದಿಷ್ಟು..

ಮುಂಬೈ: ಬಾಲಿವುಡ್​​ ಸೂಪರ್​ಸ್ಟಾರ್​ ಅಮೀರ್​ ಖಾನ್​ ಅವರು ಪುತ್ರ ಜುನೈದ್​ ಖಾನ್​​​ ಅವರ ನಟನೆಗೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೆ ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಬಿಡುಗಡೆಯಾದ ಅವರ ಮೊದಲ ಸಿನಿಮಾ 'ಮಹಾರಾಜ' ಹೆಚ್ಚು ಮೆಚ್ಚುಗೆ ಪಡೆದಿದೆ. ಈಗ ದೊಡ್ಡಪರದೆಗೆ ಬರುಲು ಜುನೈದ್​​​ ಸಜ್ಜಾಗಿದ್ದಾರೆ. ಅವರಿಗೆ ಶ್ರೀದೇವೆ ಪುತ್ರಿ ಖುಷಿ ಕಪೂರ್ ನಾಯಕಿಯಾಗಿದ್ದಾರೆ.

ಈ ಹಿಂದೆ ಅಮೀರ್​ ಖಾನ್​ ಅವರ ‘ಸೀಕ್ರೆಟ್ ಸೂಪರ್ ಸ್ಟಾರ್' ಮತ್ತು 'ಲಾಲ್​​ ಸಿಂಗ್​ ಚಡ್ಡಾ’ ಸಿನಿಮಾಗಳನ್ನು ನಿರ್ದೇಶಿಸಿದ್ದ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಿರ್ಮಾಪಕರು ಸಿನಿಮಾದ ಮೊದಲ ಪೋಸ್ಟರ್​​ ಮತ್ತು ಬಿಡುಗಡೆ ದಿನಾಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿನಿಮಾದ ಹೆಸರನ್ನು ಇನ್ನೂ ರಿವೀಲ್​ ಮಾಡಿಲ್ಲವಾದರೂ. 2025 ಫೆಬ್ರವರಿ 7ರಂದು ಸಿನಿಮಾ ತೆರೆಕಾಣಿಲಿದೆ ಎಂಬ ಮಾಹಿತಿ ನೀಡಿದ್ದಾರೆ.

ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟರ್​ನಲ್ಲಿ ಜುನೈದ್ ಮತ್ತು ಖುಷಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ಕಾಣಬಹುದು. ನೀವು ಡಿಜಿಟಲ್ ಯುಗದಲ್ಲಿ ಖುಷಿ ಕಪೂರ್ ಮತ್ತು ಜುನೈದ್ ಖಾನ್ ಅವರೊಂದಿಗೆ ಪ್ರೀತಿಯನ್ನು ಅನುಭವಿಸಲು ಸಿದ್ಧರಿದ್ದೀರಾ? ಫೆಬ್ರವರಿ 7, 2025ರಂದು ಚಿತ್ರಮಂದಿರಗಳಲ್ಲಿ! ಎಂದು ಬರೆದುಕೊಂಡಿದ್ದಾರೆ.

ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ರೀನಾ ದತ್ತಾ ಅವರ ಮಗ ಜುನೈದ್​. ನಿರ್ಮಾಪಕ ಬೋನಿ ಕಪೂರ್ ಮತ್ತು ದಿವಂಗತ ನಟಿ ಶ್ರೀದೇವಿ ಅವರ ಕಿರಿಯ ಮಗಳು ಖುಷಿ ಎಂಬುದು ಎಲ್ಲರಿಗೂ ಗೊತ್ತಿದೆ. ಜುನೈದ್​ 'ಮಹಾರಾಜ'ದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರೆ, ಖುಷಿ ಕಪೂರ್ ದಿ ಆರ್ಚೀಸ್ ಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಈ ಸಿನಿಮಾದಲ್ಲಿ ಶಾರೂಖ್​ ಖಾನ್​ ಮಗಳು ಸುಹಾನಾ ಖಾನ್ ಮತ್ತು ಅಮಿತಾಭ್​​ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಅವರನ್ನು ಪರಿಚಯಿಸಲಾಯಿತು.

ಇನ್ನೂ ಈ ಸಿನಿಮಾ ಬಗ್ಗೆ ಖುಷಿ ಕಪೂರ್​ ಅಕ್ಕ ಜಾಹ್ನವಿ ಕಪೂರ್​​ ಪ್ರತಿಕ್ರಿಯಿಸಿದ್ದು, ಇನ್​ಸ್ಟಾಗ್ರಾಮ್​ನಲ್ಲಿ ಇದು ಬಹಳ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ. ಸಿನಿಮಾ ಮಾಹಿತಿ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಶೀರ್ಷಿಕೆ ಇಲ್ಲವೆ, ಕಾತುರದಿಂದ ಕಾಯುತ್ತಿರುವುದಾಗಿ, ಇನ್ನೂ ಕಾಯಲು ಸಾಧ್ಯವಿಲ್ಲ ಎಂದು ಕಾಮೆಂಟ್​ ಮಾಡಿದ್ದಾರೆ. (ಏಜನ್ಸೀಸ್​​)