ಪಣಜಿ: ಸೌತ್ ಸಿನಿಮಾದ ಜನಪ್ರಿಯ ನಟಿ ಖುಷ್ಬೂ ಸುಂದರ್(Khushbu Sundar) ಅವರ ಕುರಿತು ಪರಿಚಯದ ಅಗತ್ಯವಿಲ್ಲ. ರಾಜಕೀಯದ ಜತೆಗೆ ಬಣ್ಣದ ಲೋಕದಲ್ಲಿಯೂ ಸಕ್ರಿಯರಾಗಿರುವ ಖುಷ್ಬೂ ಇತ್ತೀಚೆಗೆ ಗೋವಾದಲ್ಲಿ ನಡೆದ IFFI 2024ರಲ್ಲಿ ಮಹಿಳೆಯರ ಸುರಕ್ಷತೆಯ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಚಿತ್ರರಂಗದಲ್ಲಿ ಮಾತ್ರವಲ್ಲ ತನ್ನ ಜೀವನದ ಪ್ರತಿಯೊಂದು ಹಂತದಲ್ಲೂ ಮಹಿಳೆಯರು ಕಷ್ಟಪಡಬೇಕಾಗುತ್ತದೆ ಎಂದು ಹೇಳಿದರು.
ಇದನ್ನು ಓದಿ: ಪಾಲಕರ ವಿಚ್ಛೇದನ & ಮೋಹಿನಿ ವದಂತಿಗೆ ರೆಹಮಾನ್ ಪುತ್ರಿ ಕೌಂಟರ್; ರಹೀಮಾ ಹೇಳಿದ್ದೇನು ಗೊತ್ತಾ? AR Rahman
ಮಹಿಳೆಯರು ಚಿತ್ರರಂಗದಲ್ಲಿ ಮಾತ್ರವಲ್ಲದೆ ಎಲ್ಲೆಡೆ ಸವಾಲುಗಳನ್ನು ಎದುರಿಸುತ್ತಾರೆ. ಚಿತ್ರರಂಗದಲ್ಲಿ ಮಾತ್ರವಲ್ಲ ಎಲ್ಲ ಕಡೆಯೂ ಮಹಿಳೆಯರ ಸುರಕ್ಷತೆ ಅವರ ಕೈಯಲ್ಲಿದೆ. ಶೇರ್ ಆಟೋ, ಲೋಕಲ್ ಟ್ರೈನ್ ಅಥವಾ ಫ್ಲೈಟ್‌ನಲ್ಲಿ ಪ್ರಯಾಣಿಸುವಾಗ ನೀವು ಇಂತಹ ಸವಾಲನ್ನು ಎದುರಿಸುತ್ತೀರಿ. ಇದು ಚಿತ್ರರಂಗದಲ್ಲಷ್ಟೇ ಅಲ್ಲ ಎಲ್ಲೆಡೆಯೂ ಇದೆ. ಆದರೆ ಯಾರಾದರೂ ತಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆಂದು ಭಾವಿಸಿದಾಗ ಮಹಿಳೆಯರು ಮಾತನಾಡಬೇಕು ಎಂದು ನಾನು ಭಾವಿಸುತ್ತೇನೆ. ವೃತ್ತಿ ಮತ್ತು ತೊಂದರೆಗಳ ಬಗ್ಗೆ ಯೋಚಿಸಬೇಡಿ, ಕೆಟ್ಟದಾದ ಅನುಭವ ಆದಾಗ ಅಲ್ಲಿಯೇ ಮಾತನಾಡಿ ಎಂದು ಹೇಳಿದರು.
ಇದೇ ವೇಳೆ ಸಿನಿಮಾ ಚಿತ್ರೀಕರಣ ವೇಳೆ ತಮಗಾದ ಕಹಿ ಅನುಭವದ ಘಟನೆಯೊಂದನ್ನು ಹಂಚಿಕೊಂಡರು. ನಾನು ನನ್ನ ವೃತ್ತಿಜೀವನ ಆರಂಭಿಸಿದ ಸಮಯದಲ್ಲಿ ಚಿತ್ರದ ಶೂಟಿಂಗ್ ವೇಳೆ ನಾಯಕ ನನ್ನ ಜತೆ ತುಂಬಾ ವಿಚಿತ್ರವಾಗಿ ಮಾತನಾಡಿದ್ದ. ನಾವಿಬ್ಬರೂ ಸಿಬ್ಬಂದಿಯಿಂದ ದೂರದಲ್ಲಿ ಒಂದು ದೃಶ್ಯವನ್ನು ಚಿತ್ರೀಕರಿಸುತ್ತಿದ್ದಾಗ ಮುಜೆ ಕಹಿ ಸೈಕಲ್ ಗ್ಯಾಪ್ ಮೇ ಚಾನ್ಸ್ ಮಿಲ್ ಜಾಯೇಗಾ ಕ್ಯಾ? ಎಂದು ಆ ನಟ ನನ್ನನ್ನು ಕೇಳಿದ್ದ. ಆ ಕ್ಷಣವೇ ನಾನು ತಕ್ಷಣ ನನ್ನ ಚಪ್ಪಲ್ ಅನ್ನು ಎತ್ತಿ ಕೈನಲ್ಲಿಡಿದು, ನನ್ನ ಚಪ್ಪಲಿಯ ಗಾತ್ರ 41 ಆಗಿದ್ದು ನಿಮಗೆ ಇಲ್ಲಿಯೇ ಥಳಿಸಲೇ ಅಥವಾ ಇಡೀ ಯೂನಿಟ್ ಮುಂದೆ ಥಳಿಸಲೇ ಎಂದು ಕೇಳಿದೆ. ಇದಾದ ನಂತರ ನನ್ನ ಬಳಿ ಏನನ್ನೂ ಹೇಳುವ ಧೈರ್ಯ ಆತನಿಗೆ ಬರಲಿಲ್ಲ ಎಂದು ಹೇಳಿದರು.
ಆಗ ನಾನು ಸಿನಿಮಾರಂಗದಲ್ಲಿ ಹೊಸಬಳಾಗಿದ್ದರು, ನನ್ನ ಕೆರಿಯರ್ ಎನಾಗಬಹುದು ಎಂದು ಯೋಚಿಸಲಿಲ್ಲ. ನನ್ನ ಗೌರವ ನನಗೆ ಎಲ್ಲಕ್ಕಿಂತ ಮುಖ್ಯ ಎಂದು ನನಗೆ ತಿಳಿದಿತ್ತು. ನೀವು ನಿಮ್ಮನ್ನು ಗೌರವಿಸಬೇಕು ಆಗ ಮಾತ್ರ ಬೇರೆಯವರು ನಿಮ್ಮನ್ನು ಗೌರವಿಸುತ್ತಾರೆ ಎಂದು ಹೇಳಿದರು. ಯಾವುದೇ ಕೆಟ್ಟ ಅನುಭವವನ್ನು ನೀವು ಅನುಭವಿಸಿದರೆ ತಕ್ಷಣವೇ ಅದಕ್ಕೆ ಪ್ರತಿಕ್ರಿಯಿಸಿ, ಅಂತಹ ವಿಷಯವನ್ನು ಬಿಡಬಾರದು ಎಂದು ಮಹಿಳೆಯರಿಗೆ ಸಲಹೆ ನೀಡಿದರು. (ಏಜೆನ್ಸೀಸ್)