ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 3.0 ಮೊದಲ ಬಜೆಟ್ಅನ್ನು ಇಂದು (ಜುಲೈ 23) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದು, ಆಂಧ್ರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯ ಹಾಗೂ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಘೋಷಿಸಿದ್ದಾರೆ. ಇನ್ನೂ ಈ ಬಜೆಟ್ ಕುರಿತು ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇದನ್ನು ಕಾಪಿ ಕ್ಯಾಟ್ ಎಂದು ಟೀಕಿಸಿದ್ದು, ಮೋದಿ ಸರ್ಕಾರವನ್ನು ಉಳಿಸಲು ಈ ಬಜೆಟ್ ಮಂಡಿಸಲಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಖರ್ಗೆ, ಮೋದಿ ಸರ್ಕಾರ ಇಂದು ಮಂಡಿಸಿದ ಬಜೆಟ್ ಕಾಂಗ್ರೆಸ್ನ ಸಾಮಾಜಿಕ ನ್ಯಾಯದ ಅಜೆಂಡಾವನ್ನು ಸರಿಯಾಗಿ ನಕಲು ಮಾಡಲು ಆಗಿಲ್ಲ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ತಮ್ಮ ಮಿತ್ರ ಪಕ್ಷಗಳಿಗೆ ಅರೆ ಮನಸ್ಸಿನಿಂದ ಉಚಿತ ಕೊಡುಗೆಗಗಳನ್ನು ನೀಡಿ ಸರ್ಕಾರವನ್ನು ಉಳಿಸಿಕೊಳ್ಳುವ ಪ್ರಯತ್ನ ಬಜೆಟ್‌ನಲ್ಲಿ ಕಾಣಬಹುದಾಗಿದೆ.
ಇದು ದೇಶದ ಪ್ರಗತಿಗಾಗಿ ಮಂಡಿಸಿರುವ ಬಜೆಟ್ ಅಲ್ಲ, ಸೇವ್ ಮೋದಿ ಗೌರ್ನಮೆಂಟ್ ಬಜೆಟ್ ಇದಾಗಿದೆ. ಕಳೆದ 10 ವರ್ಷಗಳಿಂದ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯ ಘೋಷಣೆಗಳನ್ನು ಮಾತ್ರ ಕೇಳುತ್ತಾ ಹತಾಶೆಯಲ್ಲಿರುವ ಯುವ ಜನತೆಗೆ ಅತ್ಯಂತ ಕನಿಷ್ಠ ಘೋಷಣೆಗಳನ್ನು ಮಾಡಲಾಗಿದೆ. ರೈತರ ವಿಚಾರದಲ್ಲಿ ಹುರುಳಿಲ್ಲದ ಹೇಳಿಕೆಗಳನ್ನು ಮಾತ್ರ ನೀಡಲಾಗಿದೆ. ಒಂದೂವರೆ ಪಟ್ಟು ಎಂಎಸ್‌ಪಿ ಮತ್ತು ಆದಾಯ ದುಪ್ಪಟ್ಟು ಎಲ್ಲವೂ ಚುನಾವಣೆಯ ಮೋಸವಾಗಿವೆ. ಈ ಸರ್ಕಾರಕ್ಕೆ ಗ್ರಾಮೀಣ ವಲಯದ ಕೂಲಿ ಹೆಚ್ಚಳದ ಬಗ್ಗೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದ್ದಾರೆ.
ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಧ್ಯಮ ವರ್ಗ ಮತ್ತು ಗ್ರಾಮೀಣ ಭಾಗದ ಬಡವರಿಗೆ ಯಾವುದೇ ಯೋಜನೆಗಳಿಲ್ಲ. ಬಡವ ಎಂಬ ಪದವನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಬಿಟ್ಟರೇ ಯಾವುದೇ ಅಭಿವೃದ್ಧಿಯ ಉದ್ದೇಶ ಇಲ್ಲ. ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಏನನ್ನೂ ನೀಡಲಾಗಿಲ್ಲ. ಮೇಲಿಂದ ಮೇಲೆ ಹಣದುಬ್ಬರ ಏರುತ್ತಿದ್ದು, ಜನರು ಶ್ರಮಪಟ್ಟುಗಳಿಸುವ ಹಣವನ್ನು ತಮ್ಮ ಬಂಡವಾಳಶಾಹಿ ಸ್ನೇಹಿತರಿಗೆ ಹಂಚುವ ಕಾರ್ಯದಲ್ಲಿ ಸರ್ಕಾರ ತೊಡಗಿದೆ.
ಕೃಷಿ, ಆರೋಗ್ಯ, ಶಿಕ್ಷಣ, ಸಾರ್ವಜನಿಕ ಕಲ್ಯಾಣ ಮತ್ತು ಆದಿವಾಸಿಗಳಿಗೆ ಕಡಿಮೆ ಹಣ ಖರ್ಚು ಮಾಡಲಾಗಿದೆ. ಇವೆಲ್ಲವೂ ಬಿಜೆಪಿಯ ಆದ್ಯತಾ ಕ್ಷೇತ್ರಗಳಲ್ಲ. ಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಮೂಲಸೌಕರ್ಯ, ಉತ್ಪಾದನೆ, ಎಂಎಸ್‌ಎಂಇ, ಹೂಡಿಕೆ, ಇವಿ ಯೋಜನೆ ಎಲ್ಲವೂ ಭಾಷಣದಲ್ಲಿ ಉಳಿದಿವೆ. ಯಾವುದೇ ಪ್ರಮುಖ ಘೋಷಣೆಗಳನ್ನು ಮಾಡಲಾಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಜೆಟ್ ಕುರಿತು ವಾಗ್ದಾಳಿ ನಡೆಸಿದ್ದಾರೆ.