ನ್ಯೂಸ್

ಟಿಆರ್​ಪಿಯಲ್ಲಿ ಕಮಾಲ್​ ಮಾಡಲಿಲ್ಲ ತೆಲುಗು ಕೆಜಿಎಫ್; ಕಾರಣ ಏನಿರಬಹುದು?

ರಾಕಿಂಗ್​ ಸ್ಟಾರ್ ಯಶ್ ನಟನೆಯ ಕೆಜಿಎಫ್​ ಸಿನಿಮಾ ಅದ್ಯಾವ ತರಹ ಮೋಡಿ ಮಾಡಿತ್ತು ಮತ್ತು ದಾಖಲೆಗಳನ್ನು ಸೃಷ್ಟಿಸಿತ್ತು ಎಂಬುದು ಬಹುತೇಕ ಎಲ್ಲ ಭಾರತೀಯರಿಗೆ ಗೊತ್ತಿರುವ ವಿಚಾರ. ಬಿಡುಗಡೆಯಾದ ಬಳಿಕ ಚಿತ್ರಮಂದಿರದಲ್ಲಿ ಒಂದು ರೀತಿಯಲ್ಲಿ ದಾಖಲೆ ಮರೆದರೆ, ಓಟಿಟಿ ವೇದಿಕೆಯಲ್ಲೂ ಸಮಚಲನ ಸೃಷ್ಟಿಸಿತ್ತು. ಅಷ್ಟೇ ಅಲ್ಲ ಟಿವಿಯಲ್ಲಿ ಪ್ರಸಾರವಾದರೂ ಟಿಆರ್​ಪಿ ಗಮನಿಸಿದರೆ ಅಲ್ಲಿಯೂ ದಾಖಲೆಯೇ!

ಇಷ್ಟೆಲ್ಲ ದಾಖಲೆ ಮೇಲೆ ದಾಖಲೆ ಬರೆದ ಕನ್ನಡದ ಈ ಮಾಸ್ಟರ್​ಪಿಸ್​, ಇದೀಗ ಯಾಕೋ ಸಪ್ಪಗಾಗಿದೆ. ಅಂದರೆ, ತೆಲುಗು ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ಪಡೆದುಕೊಂಡಿದ್ದ ಈ ಸಿನಿಮಾ, ಇದೀಗ ಅದೇ ನಾಡಲ್ಲಿ ಇಳಿಮುಖಕಂಡಿದೆ. ಹೌದು, ತೆಲುಗು ಪ್ರೇಕ್ಷಕರ ಒತ್ತಾಯದ ಮೇರೆಗೆ ಮೊದಲ ಬಾರಿಗೆ ಕಿರುತೆರೆಯಲ್ಲಿ ಕೆಜಿಎಫ್​ ಪ್ರಸಾರವಾಗಿತ್ತು. ಚಿತ್ರದ ನಿರೀಕ್ಷೆ ಮಟ್ಟ ನೋಡಿದರೆ, ಈ ಹಿಂದಿನ ಹಲವು ಸಿನಿಮಾಗಳ ಟಿಆರ್ಪಿಯನ್ನು ಈ ಚಿತ್ರ ಮುರಿಯಲಿದೆ ಎಂದೇ ಹೇಳಲಾಗಿತ್ತು. ಇದೀಗ ಅದು ಹುಸಿಯಾಗಿದೆ.

ಕಳೆದ ಭಾನುವಾರ ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಕೆಜಿಎಫ್ ಪ್ರಸಾರವಾಗಿತ್ತು. ಸಹಜವಾಗಿಯೇ ಚಿತ್ರಕ್ಕೆ ಹೆಚ್ಚಿನ ಹೈಪ್ ಸಹ ಸೃಷ್ಟಿಯಾಗಿತ್ತು. ಮಹೇಶ್ ಬಾಬು ನಟನೆಯ 'ಸರಿಲೇರು ನೀಕೆವ್ವರು' ಚಿತ್ರದ ಟಿಆರ್‌ಪಿಯನ್ನು ಕೆಜಿಎಫ್​ ಮುರಿಯಲಿದೆ ಎಂದೇ ಹೇಳಲಾಗಿತ್ತು. ಆದರೆ, ಅದ್ಯಾವುದು ಈಡೇರಲಿಲ್ಲ. ಕೇವಲ 11.9 ಟಿಆರ್​ಪಿ ಪಡೆದು ನಿರಾಸೆ ಮೂಡಿಸಿದೆ. ಮಹೇಶ್​ ಬಾಬು ನಟನೆಯ ಸರಿಲೇರು ನೀಕ್ಕೆವರು ಚಿತ್ರ ಬರೋಬ್ಬರಿ 23.4 ಟಿಆರ್​ಪಿ ಪಡೆದುಕೊಂಡು, ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿತ್ತು.

ಇನ್ನು ಟಿಆರ್ಪಿ ಕಡಿಮೆಯಾಗಲು ಕಾರಣ ಹುಡುಕುತ್ತ ಹೋದರೆ ಸಾಕಷ್ಟು ಸಿಗುತ್ತವೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಬಳಿಕ ಅಮೆಜಾನ್​ ಪ್ರೈಂನಲ್ಲಿಯೂ ಸಿನಿಮಾ ತೆರೆಕಂಡಿತು. ಅಲ್ಲಿಯೂ ಕೋಟ್ಯಂತರ ವೀಕ್ಷಕರಿಂದ ಸಿನಿಮಾ ನೋಡಲ್ಪಟ್ಟಿತ್ತು. ಅದಾದ ಬಳಿಕ ಒಂದಷ್ಟು ಚಿತ್ರದ ಕಾಪಿ ಹಲವು ವೆಬ್​ಸೈಟ್​ಗಳಲ್ಲಿ ಸೋರಿಕೆಯಾಗಿದ್ದರಿಂದ ಅಲ್ಲಿಯೂ ಲಕ್ಷಾಂತರ ಮಂದಿಯಿಂದ ವೀಕ್ಷಣೆಯಾಯಿತು. ಹೀಗಾಗಿ ಟಿವಿಯಲ್ಲಿನ ಪ್ರಸಾರಕ್ಕೆ ಟಿಆರ್​ಪಿ ನಿರೀಕ್ಷಿತ ಮಟ್ಟ ತಲುಪಲಿಲ್ಲ. (ಏಜೆನ್ಸೀಸ್​)