ನ್ಯೂಸ್

ಕರೊನಾ ಎಫೆಕ್ಟ್; ‘ಕೆಜಿಎಫ್​ ಚಾಪ್ಟರ್ 2’ ಬಿಡುಗಡೆ ದಿನಾಂಕ ಬದಲು?

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್​ ಚಾಪ್ಟರ್ 2 ಈಗಾಗಲೇ ಬಿಡುಗಡೆ ದಿನಾಂಕವನ್ನು ಘೋಷಿಸಿಕೊಂಡಿದೆ. ಅಕ್ಟೋಬರ್​ 23ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಅಧಿಕೃತವಾಗಿ ಹೇಳಿಕೊಂಡಿದೆ. ಈ ನಡುವೆ, ಚಿತ್ರದ ಇನ್ನೂ ಒಂದಷ್ಟು ಭಾಗದ ಚಿತ್ರೀಕರಣ ಬಾಕಿ ಇದೆ. ಚಿತ್ರತಂಡದಿಂದ ಆ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದೆಲ್ಲವನ್ನು ಗಮನಿಸುವುದಾದರೆ, ಹೇಳಿಕೊಂಡ ದಿನಾಂಕದಂದು ಕೆಜಿಎಫ್​ ಚಾಪ್ಟರ್​ 2 ಬಿಡುಗಡೆ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಕೆಲ ಮೂಲಗಳ ಪ್ರಕಾರ, ಚಿತ್ರದ ಬಿಡುಗಡೆಯನ್ನು 2021ರ ಸಂಕ್ರಾಂತಿಗೆ ಮುಂದೂಡಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳ ತೆರೆಯುವಿಕೆ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ. ಒಂದು ವೇಳೆ ಸಿನಿಮಾ ಬಿಡುಗಡೆ ಮಾಡಿದರೂ ಪ್ರೇಕ್ಷಕ ಮೊದಲಿನಂತೆ ಬರುತ್ತಾನೆ ಎಂಬ ಭರವಸೆಯೂ ಇಲ್ಲ. ಹಾಗಾಗಿ ಕರೊನಾ ಹಾವಳಿಯ ಪ್ರಮಾಣ ಕಡಿಮೆ ಆದಮೇಲೆ ಥಿಯೇಟರ್​ಗೆ ಧಾವಿಸುವ ವಿಚಾರ ಎಲ್ಲ ಸಿನಿಮಾತಂಡಗಳ ಪ್ಲ್ಯಾನ್​.

ಈಗಾಗಲೇ ಕನ್ನಡದಲ್ಲಿನ ಹಲವು ಸಿನಿಮಾಗಳು ಬಿಡುಗಡೆ ದಿನಾಂಕವನ್ನು ಈಗಾಗಲೇ ಮುಂದೂಡಿವೆ. ಪರಭಾಷೆ ವಿಚಾರಕ್ಕೆ ಬರುವುದಾದರೆ, ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಮುಂದಿನ ವರ್ಷಕ್ಕೆ ಶಿಫ್ಟ್​ ಆಗಿವೆ. ಅದರಲ್ಲೂ ಸಂಕ್ರಾಂತಿ ದಿನವೇ ಸಾಕಷ್ಟು ಸಿನಿಮಾ ತೆರೆಗೆ ಬರಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಈ ನಡುವೆ, ಕೆಜಿಎಫ್​ ಸಹ ಅದೇ ದಿನದಂದು ರಿಲೀಸ್​ ಆಗಲಿದೆ ಎಂಬ ಮಾತಿದೆಯಾದರೂ, ಇನ್ನಷ್ಟೇ ಅದು ಅಧಿಕೃತವಾಗಬೇಕಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಸಿನಿಮಾ, ಈಗಾಗಲೇ ಬಹುತೇಕ ಶೂಟಿಂಗ್​ ಮುಗಿಸಿಕೊಂಡಿದೆ. ಒಂದಷ್ಟು ಆ್ಯಕ್ಷನ್​ ಸೀನ್​ ಮತ್ತು ಸಣ್ಣ ಪುಟ್ಟ ದೃಶ್ಯಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿದೆ.