ನ್ಯೂಸ್

ಪತ್ನಿಯ ಪ್ರಾಣ ಉಳಿಸಿಕೊಳ್ಳಲು ಪರದಾಡಿದ ಪತಿ! ಕೊನೇ ಕ್ಷಣದಲ್ಲಿ ದೇವರ ರೂಪದಲ್ಲಿ ಬಂದ ಪೊಲೀಸರು

ಕೊಟ್ಟಾಯಂ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ರಕ್ತದ ಅವಶ್ಯಕತೆ ಇದ್ದ ವ್ಯಕ್ತಿಯೊರ್ವನಿಗೆ ಕೊನೆಯ ಕ್ಷಣದಲ್ಲಿ ಪೊಲೀಸರು ನೆರವಿಗೆ ಧಾವಿಸಿದ ಮನಕಲಕುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ನಡೆದಿದೆ.

ಪೊಲೀಸರೆಂದರೆ ಕೆಲವರ ಮನಸ್ಸಿನಲ್ಲಿ ಕೆಟ್ಟ ಅಭಿಪ್ರಾಯ ಇದೆ. ಯಾವುದಕ್ಕೂ ಸ್ಪಂದಿಸುವುದಿಲ್ಲ ಮತ್ತು ಹಣ ಬಿಚ್ಚದೆ ಯಾವುದೇ ಕೆಲಸ ಮಾಡುವುದಿಲ್ಲ ಎಂಬ ತಪ್ಪು ಭಾವನೆ ಇದೆ. ಕೆಲವರು ಮಾಡುವ ತಪ್ಪಿಗೆ ಎಲ್ಲರನ್ನೂ ಅದೇ ರೀತಿ ನೋಡಬಾರದು ಮತ್ತು ಪೊಲೀಸರಲ್ಲೂ ಅಂತಃಕರಣ ಉಳ್ಳವರಿದ್ದಾರೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ.

ಅಂತಿಮ ಆಯ್ಕೆ

ಸರ್​ ನನಗೆ ಬೇರೆ ದಾರಿ ಕಾಣುತ್ತಿಲ್ಲ... ನಾನು ಎಲ್ಲ ಕಡೆ ಹುಡುಕಾಡಿದೆ, ನನಗೆ ನೆರವು ಬೇಕಿದೆ ಎಂದು ಕೇರಳದ ಥ್ರಿಕೊಡಿಥನಂ ಪೊಲೀಸ್​ ಠಾಣೆಗೆ ನಿನ್ನೆ (ಮೇ 16) ಮಧ್ಯಾಹ್ನ ಒಂದು ಕರೆ ಬರುತ್ತದೆ. ಆ ಕರೆಯನ್ನು ಥ್ರಿಕೊಡಿಥನಂ ಮೂಲದ ಅಜಿತ್​ ಎಂಬುವರು ಮಾಡಿರುತ್ತಾರೆ. ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಹೆಂಡತಿಯನ್ನು ಉಳಿಸಿಕೊಳ್ಳಲು ಅಂತಿಮ ಆಯ್ಕೆ ಎಂಬಂತೆ ಪೊಲೀಸರಿಗೆ ಕರೆ ಮಾಡಿ ನೆರವು ಕೋರುತ್ತಾರೆ.‘

ರಕ್ತಕ್ಕಾಗಿ ಅಲೆದಾಟ

ಅಷ್ಟಕ್ಕೂ ಅಜಿತ್​ ಪತ್ನಿಗೆ ಏನಾಗಿತ್ತು ಎಂದರೆ, ಒಂದೆಡೆ ಹೆರಿಗೆ ನೋವು ಆದರೆ, ಹೆರಿಗೆ ಮಾಡಲು ತಕ್ಷಣ ರಕ್ತದ ಅವಶ್ಯಕತೆ ಇರುತ್ತದೆ. ಅಜಿತ್​ ಅವರು ಎಲ್ಲ ಕಡೆ ವಿಚಾರಿಸುತ್ತಾರೆ ಮತ್ತು ಎಲ್ಲ ಕಡೆ ರಕ್ತಕ್ಕಾಗಿ ಹುಡುಕಾಡುತ್ತಾರೆ. ಆದರೆ, ಯಾವುದೇ ಪ್ರಯೋಜನ ಆಗುವುದಿಲ್ಲ. ಇಂತಹ ಸಂಕಷ್ಟು ಸ್ಥಿತಿಯಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿ ಇರುವಾಗ ಕೊನೆಯ ಆಯ್ಕೆ ಎಂಬಂತೆ ಪೊಲೀಸರ ನೆನಪಾಗಿ ಸಮೀಪದ ಠಾಣೆಗೆ ಕರೆ ಮಾಡಿ ತಮ್ಮ ಅಸಹಾಯಕತೆಯನ್ನು ಹೇಳಿಕೊಳ್ಳುತ್ತಾರೆ.

ಪೊಲೀಸರ ಮಾನವೀಯ ಕಾರ್ಯ

ಅಜಿತ್​ ಅವರ ಅಸಹಾಯಕತೆಯನ್ನು ಕೇಳಿದ ಥ್ರಿಕೊಡಿಥನಂ ಠಾಣಾ ಪೊಲೀಸರು ತಕ್ಷಣ ಅವರ ನೋವಿಗೆ ಸ್ಪಂಧಿಸುತ್ತಾರೆ. ಕೂಡಲೇ ಆಸ್ಪತ್ರೆಗೆ ತೆರಳಿ ತಾವೇ ರಕ್ತವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಕೇರಳ ಪೊಲೀಸ್​ ಫೇಸ್​ಬುಕ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದು, ಭಾರೀ ವೈರಲ್​ ಆಗುವುದರ ಜೊತೆಗೆ ಪೊಲೀಸರ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)