ತಿರುವನಂತಪುರಂ: ಇಡ್ಲಿ ತಿನ್ನುವಾಗ ವ್ಯಕ್ತಿಯೊಬ್ಬ ಸಾವಿಗೀಡಾಗಿರುವ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ. ಇದನ್ನು ಕೇಳಿ ನಿಮಗೆ ಒಂದು ಕ್ಷಣ ಶಾಕ್ ಆಗಿರಬಹುದು. ಇಡ್ಲಿ ತಿಂದರೆ ಸಾಯುತ್ತಾರಾ? ಇಡ್ಲಿಯಲ್ಲಿ ವಿಷ ಬೆರೆಸಿರಬಹುದು? ಎಂಬಿತ್ಯಾದಿ ಪ್ರಶ್ನೆಗಳು ಮೂಡಿರಬಹುದು. ಆದರೆ, ಇಲ್ಲಿ ನಡೆದಿರುವುದೇ ಬೇರೆ. ಅಷ್ಟಕ್ಕೂ ನಡೆದಿದ್ದೇನು ಎಂಬುದರ ಫುಲ್ ಡಿಟೇಲ್ಸ್ ಇಲ್ಲಿದೆ.
ಕೇರಳದ ಸ್ಥಳೀಯ ಮಾಧ್ಯಮಗಳ ಪ್ರಕಾರ, ಶನಿವಾರ ವಳಯಾರ್‌ನಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಸ್ಥಳೀಯ ಕ್ಲಬ್ ಒಂದು ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜನೆ ಮಾಡಿತ್ತು. ಈ ಸ್ಪರ್ಧೆಯಲ್ಲಿ 49 ವರ್ಷದ ಸುರೇಶ್ ಎಂಬುವರು ಭಾಗವಹಿಸಿದ್ದರು. ಸ್ಪರ್ಧೆಯ ವೇಳೆ ಇಡ್ಲಿಯನ್ನು ಗಬಗಬನೇ ತಿನ್ನುವಾಗ ಇಡ್ಲಿ ಗಂಟಲಿಗೆ ಸಿಲುಕಿ, ಉಸಿರಾಡಲಾಗದೇ ಮೃತಪಟ್ಟಿದ್ದಾರೆ. ಗೆಲ್ಲುವ ಆತುರದಲ್ಲಿ ಒಮ್ಮೆಲೆ ಸಾಕಷ್ಟು ಇಡ್ಲಿಗಳನ್ನು ತಿಂದಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಉಸಿರುಗಟ್ಟಿ ಒದ್ದಾಡುತ್ತಿರುವ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಪ್ರೇಕ್ಷಕರು ಸುರೇಶ್ರನ್ನು ರಕ್ಷಿಸಲು ಯತ್ನಿಸಿದ್ದಾರೆ. ಹೇಗೋ ಅವರ ಗಂಟಲಿನಿಂದ ಇಡ್ಲಿಯ ತುಣುಕುಗಳನ್ನು ಹೊರ ತೆಗೆದಿದ್ದಾರೆ. ಆದರೆ, ಆರೋಗ್ಯ ಹದಗೆಟ್ಟ ಕಾರಣ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ನೀಡುತ್ತಿದ್ದ ವೇಳೆ ಸುರೇಶ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ವಳಯಾರ್ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಸಗುಲ್ಲಾ ತಿನ್ನುವಾಗ ಬಾಲಕ ಸಾವು
ಇತ್ತೀಚೆಗೆ ಜಾರ್ಖಂಡ್‌ನಲ್ಲೂ ಇದೇ ರೀತಿಯ ಪ್ರಕರಣ ವರದಿಯಾಗಿದೆ. ಪೂರ್ವ ಸಿಂಗ್ಭೂಮ್ನಲ್ಲಿ ರಸಗುಲ್ಲಾ ತಿನ್ನುವ ವೇಳೆ ಯುವಕನೊಬ್ಬ ಪ್ರಾಣ ಕಳೆದುಕೊಂಡನು. ಗಲುಡಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ಪದ್ಮಹುಲಿಯಾ ಗ್ರಾಮದಲ್ಲಿ ಈ ಘಟನೆ ನಡೆಯಿತು. 16 ವರ್ಷದ ಅಮಿತ್ ಸಿಂಗ್ ಅವರ ಚಿಕ್ಕಪ್ಪ ರೋನಿ ಸಿಂಗ್ ಒಡಿಶಾದ ಅಂಗುಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 3 ತಿಂಗಳ ನಂತರ ಅವರು ಮನೆಗೆ ಮರಳಿದರು. ಚಿಕ್ಕಪ್ಪನ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣವಿತ್ತು. ಅಮಿತ್ ತನ್ನ ಚಿಕ್ಕಪ್ಪನನ್ನು ಕರೆತರಲು ಬೈಕ್‌ನಲ್ಲಿ ಗಲುಡಿಹ್ ರೈಲು ನಿಲ್ದಾಣಕ್ಕೆ ತೆರಳಿದ್ದನು. ಹಿಂದಿರುಗುವಾಗ ತನ್ನ ಚಿಕ್ಕಪ್ಪ ಹೇಳಿದಂತೆ ಸ್ವೀಟ್ ಅಂಗಡಿಯಲ್ಲಿ ರಸಗುಲ್ಲಾ ಖರೀದಿಸಿ ಇಬ್ಬರು ಮನೆಗೆ ಮರಳಿದರು.
ಮನೆ ತಲುಪಿದ ನಂತರ ಅಮಿತ್ ಎಲ್ಲರಿಗೂ ರಸಗುಲ್ಲಾ ಹಂಚಿದನು. ಬಳಿಕ ತಾನು ಕೂಡ ತುಂಬಾ ಉತ್ಸಾಹದಿಂದ ರಸಗುಲ್ಲಾ ತಿನ್ನಲು ಆರಂಭಿಸಿದನು. ಈ ವೇಳೆ ರಸಗುಲ್ಲಾ ಗಂಟಲಿಗೆ ಸಿಕ್ಕಿಕೊಂಡು, ಉಸಿರಾಟದ ತೊಂದರೆ ಶುರುವಾಯಿತು. ತಕ್ಷಣ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಅಮಿತ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. (ಏಜೆನ್ಸೀಸ್)