ಕೊಲ್ಲಂ: ಕೇರಳದ ಕೊಟ್ಟರಕ್ಕರ ಡಿಪೋದಿಂದ ಕೆಎಸ್ಆರ್ಟಿಸಿ ಬಸ್ ಕಳುವು ಮಾಡಿ ಪರಿಪ್ಪಳ್ಳಿಯಲ್ಲಿ ಬಿಟ್ಟು ಪರಾರಿಯಾಗಿದ್ದ ಖದೀಮನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಕಳ್ಳನನ್ನು ಸ್ರೀಕಾರ್ಯಂ ನಿವಾಸಿ ನಿಧಿನ್ ಅಲಿಯಾಸ್ ಟಿಪ್ಪರ್ ಅನಿ ಎಂದು ಗುರುತಿಸಲಾಗಿದೆ.
ಖದೀಮನನ್ನು ಪಲಕ್ಕಾಡ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅನೇಕ ವಾಹನಗಳನ್ನು ಕಳುವು ಮಾಡಿದ ಆರೋಪ ನಿಧಿನ್ ಮೇಲಿದೆ. ಈತ ಪಲಕ್ಕಾಡ್ ಸರ್ವೀಸ್ ಸ್ಟೇಷನ್ನಲ್ಲಿ ಕೆಲಸ ಮಾಡುತ್ತಿದ್ದ. ಮಧ್ಯರಾತ್ರಿಯಾಗಿದ್ದಕ್ಕೆ ಮನೆಗೆ ಹೋಗಲು ಬಸ್ ಕಳುವು ಮಾಡಿದ್ದಾಗಿ ನಿಧಿನ್ ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಫೆ.8ರಂದು ಕೊಟ್ಟರಕ್ಕರ ಡಿಪೋದಿಂದ ಬಸ್ ಕಳುವಾಗಿತ್ತು. ಮಾರನೇ ದಿನ ಬಸ್ ಪೆರಿಪಳ್ಳಿಯಲ್ಲಿ ಕಳುವಾದ ಕೆಲವೇ ದಿನಗಳಲ್ಲಿ ಪತ್ತೆಯಾಗಿತ್ತು. ಇದಾದ ಬಳಿಕ ಖದೀಮನನ್ನು ಬಲೆಗೆ ಬೀಳಿಸಲು ಕಾರ್ಯಾಚರಣೆಗೆ ಇಳಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವಕನೊಬ್ಬ ಡಿಪೋದಿಂದ ಬಸ್ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ.
ಆದರೆ, ಪೊಲೀಸರಿಗೆ ಖದೀಮದ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಬಳಿಕ ಸೈಬರ್ ಸೆಲ್ ನೆರವಿನಿಂದ ಕಾರ್ಯಾಚರಣೆ ತೀವ್ರಗೊಳಿಸಿದ ಪೊಲೀಸರಿಗೆ ಖದೀಮ ನಿಧಿನ್ ಬಲೆಗೆ ಬಿದ್ದಿದ್ದಾನೆ. ಆತನ ಮೊಬೈಲ್ ಟವರ್ ಲೊಕೇಶನ್ ಸಹಾಯದಿಂದ ನಿಧಿನ್ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ