

ತಿರುವನಂತಪುರಂ: ದೇವರ ನಾಡು ಕೇರಳದಲ್ಲಿ ಮತ್ತೊಮ್ಮೆ ಸಾವಿನ ಸುದ್ದಿ ಕೇಳಿಬಂದಿದೆ. ಎಸ್ಡಿಪಿಐ ಮತ್ತು ಆರ್ಎಸ್ಎಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಘಟನೆಯಲ್ಲಿ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ಮೃತನಾಗಿದ್ದಾನೆ.
ಕೇರಳದ ಆಲಪ್ಪುಳ ಜಿಲ್ಲೆಯ ವಲಯಾರ್ ಬಳಿ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಎರಡೂ ಗುಂಪಿನ ಕಾರ್ಯಕರ್ತರು ಘರ್ಷಣೆಗೂ ಮೊದಲು ವಾಗ್ವಾದ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಎಸ್ಡಿಪಿಐ ಕಾರ್ಯಕರ್ತರು ಆರ್ಎಸ್ಎಸ್ ಕಾರ್ಯಕರ್ತರ ಮೇಲೆ ಶಸ್ತ್ರಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅದರಿಂದಾಗಿ ನಂದು ಕೃಷ್ಣ(22) ಹೆಸರಿನ ಕಾರ್ಯಕರ್ತನಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಗೆ ಕರೆದೊಯ್ಯುವುದರೊಳಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಘಟನೆಯ ಬಗ್ಗೆ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ನಂದು ಕೃಷ್ಣ ಕೊಲೆಯ ಹಿಂದೆ ಪಿಎಫ್ಐ ಕೈವಾಡವಿದೆ ಎಂದು ಪಕ್ಷದ ನಾಯಕರು ದೂರಿದ್ದಾರೆ. ಘಟನೆಯ ನಂತರ ಜಿಲ್ಲೆಯನ್ನು 12 ಗಂಟೆಗಳ ಕಾಲ ಸ್ಥಗಿತಗೊಳಿಸುವಂತೆ ಬಿಜೆಪಿ ಕರೆ ನೀಡಿತ್ತು. ಕೇಂದ್ರ ಸರ್ಕಾರದ ನಾಯಕರೂ ಈ ಘಟನೆಯ ಬಗ್ಗೆ ಆಕ್ರೋಶವನ್ನು ಟ್ವೀಟ್ ಮೂಲಕ ಹೊರಹಾಕಿದ್ದಾರೆ.
ಎಸ್ಡಿಪಿಐ ಕೂಡ ಘರ್ಷಣೆಯ ಕುರಿತಾಗಿ ಪ್ರತಿಕ್ರಿಯೆ ನೀಡಿದೆ. ಆರ್ಎಸ್ಎಸ್ ಕಾರ್ಯಕರ್ತರ ಪೂರ್ವನಿಯೋಜಿತ ಸಂಚಿದು. ಮುಂಬರುವ ಚುನಾವಣೆಯ ಪ್ರಯುಕ್ತ ಎಸ್ಡಿಪಿಐ ಎಲ್ಲ ಕ್ಷೇತ್ರದಲ್ಲೂ ಮೆರವಣಿಗೆ ನಡೆಸುತ್ತಿದೆ. ಅದೇ ರೀತಿ ವಲಯಾರ್ನಲ್ಲಿ ಮೆರವಣಿಗೆ ನಡೆಸುವಾಗ ಆರ್ಎಸ್ಎಸ್ ಕಾರ್ಯಕರ್ತರು ಅಡ್ಡ ಹಾಕಿದ್ದಾರೆ. ಅದರಿಂದಾಗಿಯೇ ಘರ್ಷಣೆ ನಡೆದಿದೆ. ನಂದು ಕೃಷ್ಣ ಕೊಲೆಯ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಆಗಲಿ ಎಂದು ಆರ್ಎಸ್ಎಸ್ ನಾಯಕರು ಹೇಳಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ