Kerala Rains: ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಪ್ರಕ್ರಿಯೆ ರಚನೆಗೊಳ್ಳುತ್ತಿದ್ದಂತೆ ಕೇರಳ ಗಡಿಭಾಗಗಳಲ್ಲಿ ಬಿರುಸಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಅಂತೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ.
ಕೇರಳದ ನಾಲ್ಕು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಬಿರುಸಿನ ಮಳೆ ಮುನ್ಸೂಚನೆ ಹಿನ್ನೆಲೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ. ಮೇ.31 ರವರೆಗೆ ಕೇರಳದ ಹಲವೆಡೆ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ರಾಜ್ಯದ ಹಲವು ನಗರ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸ್ಥಳೀಯ ನಿವಾಸಿಗಳ ಬದುಕು ಕಷ್ಟಕರವಾಗಿದೆ. ಕಣ್ಣೂರಿನ ತಾವಕ್ಕರದಲ್ಲಿ ಸುಮಾರು 30 ಮನೆಗಳು ಮಳೆಗೆ ಜಲಾವೃತಗೊಂಡಿವೆ.
ವಿವಿಧ ಸ್ಥಳಗಳಲ್ಲಿ ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಮನೆಗಳು ಕುಸಿದು ಬಿದ್ದಿದ್ದು, ಬೃಹತ್ ಮರಗಳು ಧರೆಗೆ ಉರುಳಿವೆ. ಕೂತಟ್ಟುಕುಲಂನಲ್ಲಿ ಮರ ಬಿದ್ದು, ಓರ್ವ ವೃದ್ಧ ಮಹಿಳೆ ಸಾವನ್ನಪ್ಪಿದ್ದಾರೆ. ರೈಲುಗಳು ಗಂಟೆಗಟ್ಟಲೆ ತಡವಾಗಿ ಚಲಿಸುತ್ತಿವೆ. ವಿಝಿಂಜಂನಲ್ಲಿ ಬಲವಾದ ಅಲೆಗಳಿಗೆ ಎರಡು ದೋಣಿಗಳು ಮಗುಚಿ, ಮೀನುಗಾರರು ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ತುಳು ಮೂಲಜನಾಂಗದಲ್ಲಿತ್ತು ಸತ್ಯ, ಧರ್ಮ – ಎವಿಜಿ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅನಿಸಿಕೆ
ಶುಕ್ರವಾರ (ಮೇ.30) ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದ್ದು ತಿರುವನಂತಪುರಂ, ಕೊಲ್ಲಂ, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್ ಮತ್ತು ವಯನಾಡ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಠಾತ್ ಪ್ರವಾಹ, ಭೂಕುಸಿತ ಮತ್ತು ಭೂಕುಸಿತದ ಸಾಧ್ಯತೆಯ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ,(ಏಜೆನ್ಸೀಸ್).